ADVERTISEMENT

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬೆಳಗಾವಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬುಧವಾರ ಬೆಳಗಾವಿ ವಿವಾದ ಮತ್ತೆ ಪ್ರತಿಧ್ವನಿಸಿತು.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಮರಾಠಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ತಮ್ಮ ರಾಜ್ಯಕ್ಕೆ ಸೇರ್ಪಡೆ ಮಾಡಬೇಕೆಂದು ಸದಸ್ಯರು ಆಗ್ರಹಿಸಿದರು.

ಬೆಳಗಾವಿಯ ಕೆಲವು ಮರಾಠಿಗರು ಬಹುದಿನಗಳಿಂದ ನೆನಗುದಿಗೆ ಬಿದ್ದಿರುವ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಲ್ಲಿನ ಆಜಾದ್ ಮೈದಾನದಲ್ಲಿ ಧರಣಿ ನಡೆಸುತ್ತಿದ್ದು, ಈ ವಿಷಯವನ್ನು ಪಿಡಬ್ಲ್ಯುಪಿ ಶಾಸಕ ಗಣಪತಿ ರಾವ್ ದೇಶಮುಖ್ ಅವರು ಮಹಾರಾಷ್ಟ್ರ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಪ್ರಸ್ತಾಪಿಸಿದರು.

ಧರಣಿ ನಡೆಸುತ್ತಿದ್ದವರಿಗೆ ಬೆಂಬಲ ವ್ಯಕ್ತಪಡಿಸಿ ವಿಧಾನಸಭೆಯ ಕಲಾಪವನ್ನು ಸುಮಾರು 90 ನಿಮಿಷಗಳ ಕಾಲ ಮುಂದೂಡಲಾಯಿತು.

`ದೂಧಗಂಗಾ ಹಾಗೂ ವರ್ಣಾ ಜಲಾಶಯಗಳಿಂದ ಕರ್ನಾಟಕಕ್ಕೆ ತಲಾ ಒಂದೊಂದು ಟಿಎಂಸಿ (ಒಟ್ಟು 2 ಟಿಎಂಸಿ) ನೀರು ಬಿಡಲಾಗುವ ಬಗ್ಗೆ ಯಾವುದೇ ವಿರೋಧವಿಲ್ಲ~ ಎಂದು ಹೇಳಿದ ಅವರು, ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಬೆಂಬಲಕ್ಕೆ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಒತ್ತಾಯಿಸಿದರು. ಕಳೆದ 56 ವರ್ಷಗಳಿಂದ ಭಾಷಾ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹೋರಾಡಬೇಕೆಂದು ಆಗ್ರಹಿಸಿದರು.

ಅವರ ಬೇಡಿಕೆಗೆ ಬಿಜೆಪಿಯ ಗಿರೀಶ್ ಬಾಪಟ್, ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಬಾಳ್ ನಂದಗಾಂವ್ಕರ್, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜಿತೇಂದ್ರ ಅವಹದ್ ಮತ್ತು ಕೈಗಾರಿಕಾ ಸಚಿವ ನಾರಾಯಣ ರಾಣೆ ಬೆಂಬಲ ವ್ಯಕ್ತಪಡಿಸಿದರು.

ಅಧಿವೇಶನವನ್ನು ಮುಂದೂಡಿ ಎಲ್ಲ ಶಾಸಕರು, ಮುಖಂಡರು ಪಕ್ಷಾತೀತವಾಗಿ ಧರಣಿ ನಡೆಯುತ್ತಿರುವ ಮೈದಾನಕ್ಕೆ ಭೇಟಿ ನೀಡಿ ಅಲ್ಲಿ ಮರಾಠಿಗರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

 ರಾಜ್ಯದಿಂದ ನೀರು ಹರಿಸುವ ಮೊದಲು ಗಡಿ ವಿವಾದಕ್ಕೆ  ಸಂಬಂಧಿಸಿದಂತೆ ಕರ್ನಾಟಕದಿಂದ ಭರವಸೆಯನ್ನು ಪಡೆಯಬೇಕಿತ್ತು ಎಂದು ಜಿತೇಂದ್ರ ಅವಹದ್ ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಇರುವುದರಿಂದ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬೆಳಗಾವಿ ಮರಾಠಿಗರ ರಕ್ಷಣೆ ಕುರಿತು ಮಾತನಾಡುವಂತೆ ಗಾಂವ್ಕರ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.