ನವದೆಹಲಿ (ಪಿಟಿಐ): ‘ಒಂದೇ ಶ್ರೇಣಿ ಒಂದೇ ಪಿಂಚಣಿ’ (ಒಆರ್‌ಒಪಿ) ಜಾರಿಗೆ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ದೇಶದಾದ್ಯಂತ ಮಾಜಿ ಯೋಧರು ಭಾನುವಾರ ಪ್ರತಿಭಟನೆ ನಡೆಸಿದರು.
ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಮಾಜಿ ಯೋಧರು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಸೋಮವಾರದಿಂದ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.
‘ಒಂದೇ ರ್‍್ಯಾಂಕ್ ಒಂದೇ ಪಿಂಚಣಿ’ ಜಾರಿ ಸಂಬಂಧ ಸರ್ಕಾರದೊಂದಿಗೆ ನಡೆದ ಎಲ್ಲ ರೀತಿಯ ಮಾತುಕತೆಗಳು ಮುರಿದುಬಿದ್ದ ನಂತರ ಮಾಜಿ ಯೋಧರು ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಸರ್ಕಾರ ಸಹ ಜಾರಿಗೆ ಈವರೆಗೆ ಸಮಯ ನಿಗದಿ ಮಾಡಿಲ್ಲ.
ಒಆರ್‌ಒಪಿ ಜಾರಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಆದರೂ ಈವರೆಗೆ ಜಾರಿ
ಯಾಗಿಲ್ಲ ಎಂದು ಭಾರತೀಯ ಮಾಜಿ ಯೋಧರ ಚಳವಳಿಯ ಮಾಧ್ಯಮ ಸಲಹೆಗಾರ ಅನಿಲ್ ಕೌಲ್ ಹೇಳಿದ್ದಾರೆ.
‘ನಾವು ಯಾವುದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ. ಆದರೆ ಬಹುಕಾಲದಿಂದ ಜಾರಿಯಾಗದೇ ಉಳಿದಿ ರುವ ಪಿಂಚಣಿಗಾಗಿ ಪ್ರತಿಭಟನೆ ನಡೆಸುತ್ತಿ ದ್ದೇವೆ ಎಂದು ತಿಳಿಸಿದ ಪ್ರತಿಭಟನಾ ಕಾರರು, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಲು ಕಾಲಾವಕಾಶ ಕೋರಿರುವುದಾಗಿ ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ಮಾಜಿ ಯೋಧರ ಪ್ರತಿಭಟನೆಗೆ ದೆಹಲಿ ವಿಶ್ವ ವಿದ್ಯಾಲಯ ಮತ್ತು ಜವಾಹರ
ಲಾಲ್ ನೆಹರು ವಿವಿಯ ವಿದ್ಯಾರ್ಥಿಗಳೂ ಕೈ ಜೋಡಿಸಿದರು. ಜಂತರ್ ಮಂತರ್ ನಲ್ಲಿ ರೈತರೂ ಭಾಗವಹಿಸಿದ್ದರು.
ಒಆರ್‌ಒಪಿ ಜಾರಿ ಸಂಬಂಧ ಸರ್ಕಾರ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಈಗಾಗಲೇ ಹೇಳಿದ್ದಾರೆ. ಈ ನಡುವೆ ಆರ್‌ಎಸ್‌ಎಸ್ ಜತೆ ಆಪ್ತವಾಗಿ ರುವ ಕೆಲವು ಮಾಜಿ ಯೋಧರು, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದಿದ್ದು, ಜಾರಿಗೆ ಒತ್ತಾಯಿಸಿದ್ದಾರೆ. 25 ಲಕ್ಷ ಮಾಜಿ ಯೋಧರ ನಂಬಿಕೆಯನ್ನು ಹುಸಿಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.