ADVERTISEMENT

ಮಾಯಾ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ಇನ್ವಾನ್/ಅಮೇಥಿ (ಪಿಟಿಐ): ಕೋಟ್ಯಂತರ ರೂಪಾಯಿಗಳ ಹಣವನ್ನು ಕಟ್ಟಡ ಮತ್ತು ಸ್ಮಾರಕಗಳ ನಿರ್ಮಾಣಕ್ಕೆ ವಿನಿಯೋಗಿಸಿರುವಂತಹ ಮಾಯಾವತಿಯವರ ಸರ್ಕಾರ ಮುಂದುವರಿಯಬೇಕೇ ಅಥವಾ ಜನಪರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಹ ಸರ್ಕಾರ ಬೇಕೇ ಎಂಬುದನ್ನು ಈ ಚುನಾವಣೆಯಲ್ಲಿ ಜನರೇ ನಿರ್ಧರಿಸಬೇಕು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ  ಭಾನುವಾರ ಇಲ್ಲಿ ಕರೆ ನೀಡಿದ್ದಾರೆ.

 ಉತ್ತರ ಪ್ರದೇಶದಲ್ಲಿ ಫೆ.19ರಂದು 4ನೇ ಹಂತದ ಮತದಾನ ನಡೆಯುವ  ಕ್ಷೇತ್ರಗಳಲ್ಲಿ ಐದು ದಿನಗಳ ಪ್ರಚಾರ ಕೈಗೊಂಡಿರುವ ಅವರು ಮುಖ್ಯಮಂತ್ರಿ ಮಾಯಾವತಿ ವಿರುದ್ಧ  ತೀವ್ರ ಟೀಕಾ ಪ್ರಹಾರ ಹರಿಸಿದ್ದಾರೆ.
  ಕೇವಲ ಒಂದು ಕ್ಷೇತ್ರ ಅಥವಾ ಕೆಲವು ವ್ಯಕ್ತಿಗಳನ್ನಷ್ಟೇ ಗಮನದಲ್ಲಿರಿಸಿಕೊಳ್ಳದೆ, ಇಡೀ ರಾಜ್ಯ ಅಥವಾ ದೇಶದ ಹಿತದೃಷ್ಟಿ ಇರಿಸಿಕೊಂಡು ಮತದಾನ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

ಜನಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ಜನರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹೊರತು ಜನಪ್ರತಿನಿಧಿಗಳ ಆರ್ಥಿಕಾಭಿವೃದ್ಧಿಗಾಗಿ ಅಲ್ಲ ಅಂತಹ ನಾಯಕರಿಗೆ ಈ ಬಾರಿ ಸರಿಯಾದ   ಪಾಠ ಕಲಿಸುವಂತೆ ಕೋರಿದ್ದಾರೆ.

ರಾಹುಲ್ ಗಾಂಧಿಯವರು ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟು ಚುನಾವಣಾ ರಾಜಕಾರಣ ನಡೆಸುತ್ತಿರುವುದಲ್ಲ, ಈ ನಾಡಿನ ಜನರಿಗೆ ಏನಾದರೂ ಒಳಿತು ಮಾಡಬೇಕೆಂಬ ತುಡಿತದಿಂದ ಅವರು ರಾಜಕಾರಣದಲ್ಲಿ ತೊಡಗಿದ್ದಾರೆ ಎಂದ ಪ್ರಿಯಾಂಕಾ ಅವರು, `ಪ್ರಧಾನಿ ಮನಮೋಹನ್ ಸಿಂಗ್ ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿ ದ್ದಾರೆ~ ಎಂದು ಹೇಳಿದ್ದಾರೆ.

ಮೇನಕಾ ಗಾಂಧಿ ಟೀಕಾಸ್ತ್ರ ಪ್ರಯೋಗ

ಬದ್ವಾನ್,ಉತ್ತರಪ್ರದೇಶ (ಪಿಟಿಐ):  ಬಿಎಸ್‌ಪಿ ನಾಯಕಿ ಮಾಯಾವತಿಯವರ ಭ್ರಷ್ಟಾಚಾರಗಳ ಕುರಿತು ಬಿಜೆಪಿ ನಾಯಕಿ ಮೇನಕಾ ಗಾಂಧಿ ಭಾನುವಾರ ಇಲ್ಲಿ ನಡೆದ ಚುನಾವಣಾ ರ‌್ಯಾಲಿಯೊಂದರಲ್ಲಿ ತೀವ್ರ ಟೀಕಾಸ್ತ್ರಗಳನ್ನು ಪ್ರಯೋಗಿಸಿದರು.

ಇದೇ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಮೇಲೆ ಮಹಿಳೆಯೊಬ್ಬರು ಚಪ್ಪಲಿ ಎಸೆದ ಘಟನೆಯನ್ನು ಖಂಡಿಸಿದರಲ್ಲದೆ, `ಬಿಜೆಪಿ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿಯಾಗುತ್ತಾರೆ~ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT