ADVERTISEMENT

ಮಾರನ್ ನಿವಾಸಕ್ಕೆ 343 ದೂರವಾಣಿ ಸಂಪರ್ಕ: ದಾಖಲೆ ಸಿಬಿಐ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ):  ಮಾಜಿ ದೂರ ಸಂಪರ್ಕ ಸಚಿವ ದಯಾನಿಧಿ ಮಾರನ್ ಅವರ ಚೆನ್ನೈ ನಿವಾಸಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ 343 ಅಧಿಕ ಸಾಮರ್ಥ್ಯದ ದೂರವಾಣಿಗೆ ಸಂಬಂಧಿಸಿದಂತೆ ಬಿಎಸ್‌ಎನ್‌ಎಲ್ ನೀಡಿರುವ ದಾಖಲೆಗಳನ್ನು ಸಿಬಿಐ ಪರಿಶೀಲಿಸುತ್ತಿದೆ.

ಈ ಅಧಿಕ ಸಾಮರ್ಥ್ಯದ ದೂರವಾಣಿ ಗಳನ್ನು ಮಾರನ್ ಸಹೋದರನ ಒಡೆತನದ ಖಾಸಗಿ ವಾಹಿನಿ ಅನಧಿಕೃತ ವಾಗಿ ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಬಿಎಸ್‌ಎನ್‌ಎಲ್ ಒದಗಿಸಿರುವ ದಾಖಲೆಗಳನ್ನು ಪರಿಶೀಲಿಸಲು ಸಿಬಿಐಗೆ ಕನಿಷ್ಠ ಎರಡು ತಿಂಗಳ ಕಾಲಾವಕಾಶ ಬೇಕಾಗಿದ್ದು, ನಂತರ ಸಿಬಿಐ ಪ್ರಕರಣ ದಾಖಲು ಮಾಡಲಿದೆ.

ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ನ್ಯಾಯಾಲಯದಲ್ಲಿ ಪ್ರಾ ಮಿಕ ವರದಿಯನ್ನು ಸಲ್ಲಿಸಿದೆ. ನಂತರ ಈ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಕೋರಲಾಗಿತ್ತು.
ದಯಾನಿಧಿ ಮಾರನ್ ನಿವಾಸಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ 343 ದೂರವಾಣಿ ಸಂಪರ್ಕವನ್ನು ಅನಧಿಕೃತವಾಗಿ ಅವರ ಸಹೋದರನ ಒಡೆತನದ ಸನ್ ಟಿ.ವಿ ವಾಹಿನಿಯವರು ಬಳಸಿಕೊಂಡಿರುವ ಆರೋಪ ಕುರಿತು ಈಗ ಸಿಬಿಐ ಪರಿಶೀಲನೆ ನಡೆಸುತ್ತಿದೆ.

ಅಂತರರಾಷ್ಟ್ರೀಯ ಕರೆಗಳನ್ನೂ ಮಾಡಬಹುದಾದ ದೂರವಾಣಿಗಳನ್ನು ಅಷ್ಟೊಂದು ಪ್ರಮಾಣದಲ್ಲಿ ಹೇಗೆ ನೀಡಲಾಯಿತು ಹಾಗೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಧಿಕ ಸಾಮರ್ಥ್ಯದ ದೂರವಾಣಿ ಸಂಪರ್ಕ ನೀಡಿರುವುದರಿಂದ ಆಗಿರುವ ನಷ್ಟದ ಪ್ರಮಾಣವನ್ನೂ ಸಿಬಿಐ ಅಂದಾಜು ಮಾಡಲಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.