ADVERTISEMENT

ಮಾರನ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಚೆನ್ನೈ/ ನವದೆಹಲಿ/ ಹೈದರಾಬಾದ್  (ಪಿಟಿಐ/ಐಎಎನ್‌ಎಸ್): 2-ಜಿ ತರಂಗಾಂತರ ಹಗರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕ, ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಮತ್ತು ಅವರ ಅಣ್ಣ ಕಲಾನಿಧಿ ಮಾರನ್ ಅವರ ಮನೆ, ಕಚೇರಿಗಳ ಮೇಲೆ ಸೋಮವಾರ ಸಿಬಿಐ ದಾಳಿ ನಡೆಸಿತು.

ಚೆನ್ನೈ ಹಾಗೂ ದೆಹಲಿಯಲ್ಲಿರುವ ದಯಾನಿಧಿ ಅವರ ಮನೆ ಹಾಗೂ ಕಚೇರಿಗಳು, ಹೈದರಾಬಾದ್‌ನ ಸನ್ ನೆಟ್‌ವರ್ಕ್ ಕಚೇರಿ ಸೇರಿದಂತೆ 9 ಸ್ಥಳಗಳಲ್ಲಿ ದಾಳಿ ನಡೆಸಿ ಕೆಲ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಡಿಎಂಕೆ ಈ ದಾಳಿಯ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ದಾಳಿ ಸುದ್ದಿ ಕೇಳಿದ್ದೇ ತಡ ಕರುಣಾನಿಧಿ ಅವರ ಪುತ್ರ ಎಂ.ಕೆ.ತಮಿಳರಸು ಅವರು ದಯಾನಿಧಿ ಅವರ ಮನೆಗೆ ದೌಡಾಯಿಸಿದರು. ಆದರೆ ತನಿಖಾ ತಂಡದ ಅಧಿಕಾರಿಗಳು ಅವರನ್ನು ಮನೆಯೊಳಗೆ ಪ್ರವೇಶಿಸಲು ಬಿಡಲಿಲ್ಲ.
 
ಮಾರನ್ ಸಹೋದರರು ಹಾಗೂ ಅಪೋಲೊ ಆಸ್ಪತ್ರೆ ನಿರ್ದೇಶಕಿ ಸುನಿತಾ ರೆಡ್ಡಿ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ ಸಿಬಿಐ, ಸಹೋದರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಎಫ್‌ಐಆರ್ ಕೂಡ ದಾಖಲಿಸಿದೆ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ದೆಹಲಿಯಲ್ಲಿ ತಿಳಿಸಿದ್ದಾರೆ.

ದಯಾನಿಧಿ ಮಾರನ್ ಅವರು ದೂರಸಂಪರ್ಕ ಸಚಿವರಾಗಿದ್ದಾಗ ತಾವು ಬಲವಂತವಾಗಿ ಏರ್‌ಸೆಲ್ ಕಂಪೆನಿಯನ್ನು ಮಾರಬೇಕಾಯಿತು ಎಂದು ಉದ್ಯಮಿ ಸಿ.ಶಿವಶಂಕರನ್ ಅವರು ನೀಡಿದ ದೂರಿನ ಮೇಲೆ ಈ ದಾಳಿ ನಡೆದಿದೆ.
ಏರ್‌ಸೆಲ್‌ಗೆ ದೂರಸಂಪರ್ಕ ಪರವಾನಗಿ ಕೊಟ್ಟಿರಲಿಲ್ಲ, ಟಿ.ಆನಂದ ಕೃಷ್ಣ ಒಡೆತನದ, ಮಲೇಷ್ಯಾ ಮೂಲದ ಮ್ಯಾಕ್ಸಿಸ್ ಕಂಪೆನಿಗೆ ತಮ್ಮ ಕಂಪೆನಿಯನ್ನು ಅನಿವಾರ್ಯವಾಗಿ ಮಾರಬೇಕಾಯಿತು ಎಂದು ಶಿವಶಂಕರನ್ ಆರೋಪಿಸಿದ್ದಾರೆ.

ಸನ್ ಟಿ.ವಿಯಲ್ಲಿ ಹೂಡಿಕೆ ಮಾಡಿರುವ ಆಸ್ಟ್ರಾ ಟಿ.ವಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಲ್ಫ್  ಮಾರ್ಷಲ್, ಟಿ.ಆನಂದ ಕೃಷ್ಣನ್ ಹಾಗೂ ಸನ್ ಡೈರೆಕ್ಟ್ ಟಿ.ವಿ, ಆಸ್ಟ್ರೊ ಆಲ್ ಏಷ್ಯಾ ನೆಟ್‌ವರ್ಕ್ಸ್, ಮ್ಯಾಕ್ಸಿಸ್ ಕಮ್ಯುನಿಕೇಶನ್ ಕಂಪೆನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೆಹಲಿಯ ತಂಡ ಶೋಧ ಕಾರ್ಯ ನಡೆಸುತ್ತಿದೆ ಎಂದು ಚೆನ್ನೈನಲ್ಲಿರುವ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2005ರಲ್ಲಿ ಏರ್‌ಸೆಲ್ ಅಧ್ಯಕ್ಷರಾಗಿದ್ದ ಸುನಿತಾ ರೆಡ್ಡಿ ಅವರನ್ನು ಸಿಬಿಐ ಕಳೆದ ತಿಂಗಳು ವಿಚಾರಣೆಗೆ ಒಳಪಡಿಸಿತ್ತು. ಏರ್‌ಸೆಲ್‌ನಲ್ಲಿ ಶೇ 26 ರಷ್ಟು ಪಾಲುದಾರಿಕೆ ಹೊಂದಿರುವ ಸಿಂಧ್ಯಾ ಸೆಕ್ಯುರಿಟೀಸ್ ಮತ್ತು ಇನ್‌ವೆಸ್ಟ್‌ಮೆಂಟ್ಸ್‌ನಲ್ಲಿ ಇವರು ಷೇರು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.