ADVERTISEMENT

ಮಾರ್ಗದರ್ಶಿ ಸೂತ್ರ ಪಾಲನೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST

ನವದೆಹಲಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಸಂಬಂಧ, 1997ರ ವಿಶಾಖ ಪ್ರಕರಣದಲ್ಲಿ ನೀಡಲಾಗಿರುವ ಮಾರ್ಗಸೂಚಿ ಪಾಲನೆಗೆ ಸಮಿತಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರ, ಭಾರತ ವಕೀಲರ ಪರಿಷತ್ತು, ಭಾರತ ವೈದ್ಯಕೀಯ ಮಂಡಳಿ ಹಾಗೂ ಖಾಸಗಿ ಕಂಪೆನಿಗಳಿಗೆ ಆದೇಶ ನೀಡಿದೆ.

ನ್ಯಾ. ಆರ್.ಎಂ. ಲೋಧ ಹಾಗೂ ಎ.ಆರ್.ದವೆ ಅವರನ್ನು ಒಳಗೊಂಡ ನ್ಯಾಯಪೀಠ, ಎರಡು ತಿಂಗಳಲ್ಲಿ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸಿತು. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೂರು ಸಮಿತಿಗಳನ್ನು ರಚಿಸಬೇಕು. ಮಹಿಳೆಯರ ನೇತೃತ್ವದ ಸಮಿತಿಯಲ್ಲಿ ಸ್ವತಂತ್ರ ಸದಸ್ಯರು ಇರಬೇಕೆಂದು ಸೂಚಿಸಿದೆ.

ಮನೆಯೊಳಗೆ ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ಸೇರಿದಂತೆ ಎಲ್ಲ ರೀತಿಯ ದೌರ್ಜನ್ಯ ತಡೆಗೆ ಸಂಸತ್ತು ಹಾಗೂ ರಾಜ್ಯ ವಿಧಾನ ಮಂಡಲಗಳಲ್ಲಿ ಅಗತ್ಯ ಕಾನೂನು ರೂಪಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಮಹಿಳೆಯರನ್ನು ಗೌರವ- ಘನತೆ ಹಾಗೂ ಸಭ್ಯತೆ ನಡೆಸಿಕೊಳ್ಳಲು ಇಂತಹ ಕಾನೂನುಗಳನ್ನು ರೂಪಿಸಬೇಕಿದೆ ಎಂದಿದೆ.

ಪ್ರತಿಯೊಂದು ಸಂಸ್ಥೆ ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ತಪ್ಪಿತಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ವಿಶಾಖ ಪ್ರಕರಣದ ಮಾರ್ಗಸೂಚಿ ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಿದೆ. ಮಹಿಳಾ ವಕೀಲರು, ಮಹಿಳಾ ವೈದ್ಯರು, ನರ್ಸ್‌ಗಳು, ಮಹಿಳಾ ಎಂಜಿನಿಯರ್ ಮೇಲೆ ಕೆಲಸದ ಸ್ಥಗಳಲ್ಲಿ ನಡೆಯುವ ದೌರ್ಜನ್ಯ ತಪ್ಪಬೇಕಿದೆ ಎಂದು ನ್ಯಾಯಪೀಠ ಹೇಳಿದೆ.

ವಿಶಾಖ ಪ್ರಕರಣದ ತೀರ್ಪು ಪ್ರಕಟವಾಗಿ 15 ವರ್ಷ ಕಳೆದಿದ್ದರೂ ತನ್ನ ಮಾರ್ಗಸೂಚಿ ಆಧರಿಸಿ ಯಾವುದೇ ಕಾನೂನು ಕಟ್ಟಳೆಗಳನ್ನು ರೂಪಿಸಿಲ್ಲ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಕ್ಕೆ ಬಾಕಿ ಉಳಿದಿದೆ.

ಈ ಮಸೂದೆಯನ್ನು ಲೋಕಸಭೆ ಈಚೆಗೆ ಅಂಗೀಕಾರ ಮಾಡಿದೆ. ಆದರೆ, ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ನ್ಯಾಯ- ಗೌರವ ಸಿಗಬೇಕೆಂಬ ಸಂವಿಧಾನ ಶಿಲ್ಪಿಗಳ ಕನಸು ಇನ್ನೂ ನನಸಾಗಬೇಕಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸಂಸತ್ತು ಹಾಗೂ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಮಾತು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಒಟ್ಟಾರೆ ಸ್ಥಾನದಲ್ಲಿ ಶೇ.10- 12ರಷ್ಟು ಮಾತ್ರ ಮಹಿಳಾ ಸಮುದಾಯಕ್ಕೆ ಲಭ್ಯವಾಗುತ್ತಿದೆ.

ವಿಶ್ವಸಂಸ್ಥೆಯ ಲಿಂಗ ಸಮಾನತೆ ಪಟ್ಟಿಯಲ್ಲಿ ಭಾರತ 147 ರಾಷ್ಟ್ರಗಳ ಪೈಕಿ. 129ನೇ ಸ್ಥಾನದಲ್ಲಿದೆ. ಆಫ್ಘಾನಿಸ್ತಾನ ಹೊರತುಪಡಿಸಿದರೆ ಉಳಿದೆಲ್ಲ ದಕ್ಷಿಣ ಏಷ್ಯಾ ರಾಷ್ಟ್ರಗಳು ಈ ವಿಷಯದಲ್ಲಿ ಮುಂದಿವೆ ಎಂದು ನ್ಯಾಯಪೀಠ ವಿಶ್ಲೇಷಿಸಿದೆ.
 
ವಿಶಾಖ ಪ್ರಕರಣದ ಮಾರ್ಗಸೂಚಿ ಅನ್ವಯಿಸಿ ಕೆಲವು ರಾಜ್ಯ ಸರ್ಕಾರ ತನ್ನ ನಾಗರಿಕ ಸೇವಾ ಕಾಯ್ದೆಗೆ ತಿದ್ದುಪಡಿ ಮಾಡಿಲ್ಲ. ಕರ್ನಾಟಕ ನಾಗರಿಕ ಸೇವಾ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಆದರೆ, ಕೈಗಾರಿಕಾ ಉದ್ಯೋಗ ನಿಯಮಕ್ಕೆ ಸೂಕ್ತ ಬದಲಾವಣೆ ತಂದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.