ADVERTISEMENT

ಮಾರ್ಚ್ 1ರಿಂದ ಪ್ಲಾಸ್ಟಿಕ್ ಸ್ಯಾಚೆಟ್ ನಿಷೇಧ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:35 IST
Last Updated 17 ಫೆಬ್ರುವರಿ 2011, 17:35 IST

ನವದೆಹಲಿ: ಪಾನ್ ಮಸಾಲ ಹಾಗೂ ಗುಟ್ಕಾ ತಯಾರಕರು ತಮ್ಮ ಉತ್ಪನ್ನಗಳಿಗೆ ಮಾರ್ಚ್ 1ರಿಂದ ಪ್ಲಾಸ್ಟಿಕ್ ಸ್ಯಾಚೆಟ್‌ಗಳನ್ನು ಬಳಕೆ ಮಾಡುವಂತಿಲ್ಲ.
ಗುಟ್ಕಾ ಅಗಿಯುವುದು ಶೇ 90ರಷ್ಟು ಬಾಯಿ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂಬ ಸರ್ಕಾರದ ವಾದವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ಲಾಸ್ಟಿಕ್ ಸ್ಯಾಚೆಟ್‌ಗಳಲ್ಲಿ ಗುಟ್ಕಾ, ಪಾನ್ ಮಸಾಲ ಮಾರಾಟ ನಿಷೇಧಿಸುವ ತನ್ನ ಹಿಂದಿನ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಗುರುವಾರ ನಿರಾಕರಿಸಿತು.

ನ್ಯಾ. ಜಿ.ಎಸ್. ಸಿಂಘ್ವಿ ಹಾಗೂ ನ್ಯಾ. ಅಶೋಕ್ ಕುಮಾರ್ ಅವರನ್ನೊಳಗೊಂಡ ಪೀಠದ ಮುಂದೆ ‘ತಂಬಾಕು ಸೇವನೆ ಪರಿಣಾಮ’ ಕುರಿತಂತೆ ತಜ್ಞರ ವರದಿಗಳಿರುವ ಮೂರು ಸಂಪುಟಗಳನ್ನು ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಂ ಸಲ್ಲಿಸಿದರು.

ಒಟ್ಟು ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 86ರಷ್ಟು ಭಾರತದ ಪಾಲು. ಇದರಲ್ಲಿ ಶೇ 90 ಭಾಗ ಗುಟ್ಕಾ ಅಗಿಯುವುದರಿಂದ ಬರುತ್ತಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಈ ವರದಿಗಳನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಹಾಕಿರುವ ಮಾರ್ಚ್ 1ರ ಗಡುವು ವಿಸ್ತರಿಸಲು ನಿರಾಕರಿಸಿತು.

ತಂಬಾಕು ಉತ್ಪನ್ನ ಮತ್ತು ಗುಟ್ಕಾ ಉತ್ಪನ್ನಗಳಿಗೆ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಯಂತ್ರಿಸಲು ಕೇಂದ್ರ ಫೆ. 4ರಂದು ‘ಪ್ಲಾಸ್ಟಿಕ್ ನಿರ್ವಹಣೆ ಹಾಗೂ ವಿಲೇವಾರಿ ಕಾಯ್ದೆ- 1009’ ಪ್ರಕಟಪಡಿಸಿದೆ.
ಪ್ಲಾಸ್ಟಿಕ್ ಸ್ಯಾಚೆಟ್‌ಗಳನ್ನು ಬಳಕೆ ಮಾಡುವುದನ್ನು ನಿಷೇಧ ಮಾಡಿದ ರಾಜಸ್ತಾನ ಹೈಕೋರ್ಟ್ ಆದೇಶ ಪ್ರಶ್ನಿಸಿ ಗುಟ್ಕಾ ತಯಾರಕರು ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಡಿಸೆಂಬರ್ 7ರಂದು ಸುಪ್ರೀಂ ಕೋರ್ಟ್ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಮಾರ್ಚ್ 1ರಿಂದ ಪ್ಲಾಸ್ಟಿಕ್ ಚೀಲಗಳಲ್ಲಿ ಮಾರಾಟ ಮಾಡುವಂತಿಲ್ಲ ಎಂದು ಆದೇಶಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.