ADVERTISEMENT

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ: ಸಾಧ್ವಿ, ಪುರೋಹಿತ್ ಶೀಘ್ರವಿಚಾರಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 19:30 IST
Last Updated 6 ಫೆಬ್ರುವರಿ 2011, 19:30 IST

ಮಾಲೇಗಾಂವ್/ ಮುಂಬೈ (ಪಿಟಿಐ): ಮಾಲೇಗಾಂವ್‌ನಲ್ಲಿ 2006ರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಹಿಂದೂ ಬಲಪಂಥೀಯ ಗುಂಪಿನ ಕೈವಾಡದ ಶಂಕೆ ಹಿನ್ನೆಲೆಯಲ್ಲಿ ಈ ಗುಂಪಿನ ಹಲವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಆಲೋಚಿಸಿದೆ.

ಹಿಂದೂ ಬಲಪಂಥೀಯ ಸಂಘಟನೆಯಾದ ಅಭಿನವ್ ಭಾರತ್‌ನ ಸದಸ್ಯ ಸ್ವಾಮಿ ಅಸೀಮಾನಂದ ಅವರು ಮ್ಯಾಜಿಸ್ಟ್ರೇಟ್ ಮುಂದೆ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ 35 ಜನರನ್ನು ಬಲಿ ತೆಗೆದುಕೊಂಡ 2006ರ ದಾಳಿ ಬಗ್ಗೆ ಬಲಪಂಥೀಯ ಸಂಘಟನೆಗಳನ್ನು ಪ್ರಶ್ನಿಸಲಾಗುತ್ತಿದೆ.

2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಲೆ.ಕ. ಪ್ರಸಾದ್ ಪುರೋಹಿತ್ ಮತ್ತು ಪ್ರವೀಣ್ ಮುತಾಲಿಕ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮಹಾರಾಷ್ಟ್ರ ಎಟಿಎಸ್ 2006ರ ದಾಳಿ ಪ್ರಕರಣದಲ್ಲಿ ಈ ಹಿಂದೆ ಬಂಧಿಸಿದ ಒಂಬತ್ತು ಮಂದಿ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಮಹಾರಾಷ್ಟ್ರ ಸಂಘಟಿತ ಅಪರಾಧ ತಡೆ ಕಾಯ್ದೆ ಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

ಸಿಬಿಐನಿಂದ ಬಂಧನಕ್ಕೊಳಗಾದ ಅಸೀಮಾನಂದ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಮಾಲೇಗಾಂವ್ ಸ್ಫೋಟಕ್ಕೆ ಹಿಂದೂ ಉಗ್ರರ ಗುಂಪು ಸಂಚು ರೂಪಿಸಿತ್ತು. ಮಾಲೇಗಾಂವ್ 2006ರ ಸ್ಫೋಟಕ್ಕೆ ಇತರರ ಜತೆ ಕಾರಣನಾಗಿದ್ದ ಕಾರ್ಯಕರ್ತ ಸುನಿಲ್ ಜೋಶಿಯನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಹತ್ಯೆಗೈದಿದ್ದಾರೆ ಎಂದು ಅಸೀಮಾನಂದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಠಾಕೂರ್, ಪುರೋಹಿತ್, ಮತಾಲಿಕ್ ಜೊತೆಗೆ ರಾಕೇಶ್, ಅಜಯ್, ಶಿವನಾರಾಯಣ್, ಶ್ಯಾಮ್‌ಸಾಹು ಮತ್ತಿತರರನ್ನು ಕೂಡ ಸಿಬಿಐ ಪ್ರಶ್ನಿಸಲಿದೆ ಎಂದು ಮೂಲಗಳು ಹೇಳಿವೆ.
ಮಾಲೇಗಾಂವ್‌ನಲ್ಲಿ 2008ರಲ್ಲಿ ಆರು ಮಂದಿ ಸಾವಿಗೆ ಕಾರಣವಾಗಿದ್ದ ಸ್ಫೋಟ ಪ್ರಕರಣದಲ್ಲಿ ಇವರೆಲ್ಲನ್ನೂ ಮಹಾರಾಷ್ಟ್ರ ಎಟಿಎಸ್ ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.