ADVERTISEMENT

ಮಾಲ್ಡೀವ್ಸ್ ಬಿಕ್ಕಟ್ಟು ಪರಿಹಾರಕ್ಕೆ ಭಾರತದ ರಾಜತಾಂತ್ರಿಕರು

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 19:30 IST
Last Updated 10 ಫೆಬ್ರುವರಿ 2012, 19:30 IST

ನವದೆಹಲಿ (ಐಎಎನ್‌ಎಸ್):  ಮಾಲ್ಡೀವ್ಸ್‌ನಲ್ಲಿ ಕ್ಷಿಪ್ರ ಕ್ರಾಂತಿಯ ನಂತರ  ಬಿಕ್ಕಟ್ಟು ಉಲ್ಭಣಿಸಿರುವುದರಿಂದ ಅಲ್ಲಿನ ನಿಜ ಪರಿಸ್ಥಿತಿಯನ್ನು ಅವಲೋಕನ ಮಾಡಿ, ಸೂಕ್ತ ಮಾರ್ಗದರ್ಶನ ನೀಡಿ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು ಶುಕ್ರವಾರ ರಾಜಧಾನಿ ಮಾಲೆಗೆ ತೆರಳಿದ್ದಾರೆ.

ವಿದೇಶಾಂಗ ಖಾತೆ ಕಾರ್ಯದರ್ಶಿ ಎಂ.ಗಣಪತಿ ನೇತೃತ್ವದ ತಂಡ ವಿಶೇಷ ವಿಮಾನದಲ್ಲಿ ಮಾಲೆಗೆ ತೆರಳಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಾಲ್ಡೀವ್ಸ್‌ನಲ್ಲಿ ಮೊದಲ ಚುನಾಯಿತ ಸರ್ಕಾರ ಪತನಗೊಂಡ ನಂತರದ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಭಾರತದ ತುರ್ತು ಯೋಜನೆಯೊಂದನ್ನು ರೂಪಿಸಿದೆ.

ಅಧ್ಯಕ್ಷ ನಶೀದ್ ರಾಜೀನಾಮೆಯ ನಂತರ ಅವರ ಬೆಂಬಲಿಗರು ದ್ವೀಪ ರಾಷ್ಟ್ರದಲ್ಲಿ ದಾಂಧಲೆ ನಡೆಸಿದ್ದು, ಈ ಹಿನ್ನೆಲೆಯಲ್ಲಿ ನಶೀದ್ ಅವರನ್ನು ಬಂಧಿಸುವಂತೆ ಗುರುವಾರ ನ್ಯಾಯಾಲಯ ಆದೇಶ ನೀಡಿದೆ. ಆದರೆ ಹೆಚ್ಚುತ್ತಿರುವ ಜಾಗತಿಕ ಒತ್ತಡ ಮತ್ತು  ಸೂಕ್ತ ತನಿಖೆ ಇಲ್ಲದೇ ಅವರನ್ನು ಬಂಧಿಸುವುದಿಲ್ಲ ಎಂದು ನೂತನ ಅಧ್ಯಕ್ಷ ಮೊಹ್ಮದ್ ವಾಹಿದ್ ಹಸನ್ ಭರವಸೆ ನೀಡಿದ್ದಾರೆ. ಬಂಧನ ಅಥವಾ ಅವರಿಗೆ ತೊಂದರೆ ನೀಡುವ ಕ್ರಮಕ್ಕೆ ಮುಂದಾಗಬಾರದು ಎಂದು ಭಾರತ ಆಗ್ರಹ ಮಾಡಿದೆ.

ಬದಲಾಗಿ ಅಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಶಾಂತಿಯುತ ಮಾರ್ಗದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ಮಾಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.