ADVERTISEMENT

ಮಾಹಿತಿದಾರರಿಗೆ ಜೀವರಕ್ಷಣೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಭ್ರಷ್ಟಾಚಾರ ಚಟುವಟಿಕೆಗಳ ಕುರಿತಂತೆ ರಹಸ್ಯ ಮಾಹಿತಿಗಳನ್ನು ಬಯಲುಗೊಳಿಸುವ ಕೇಂದ್ರ ಸರ್ಕಾರದ ನೌಕರರು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಜೀವರಕ್ಷಣೆ ಪಡೆಯಲಿದ್ದಾರೆ.

ಸರ್ಕಾರಿ ಇಲಾಖೆ, ಕಚೇರಿಗಳಲ್ಲಿ ನಡೆಯುವ ಅಕ್ರಮ ಚಟುವಟಿಕೆ, ಭ್ರಷ್ಟಾಚಾರ ಕುರಿತು ಮಾಹಿತಿ ನೀಡುವ ಉದ್ಯೋಗಿಗಳ ದೂರುಗಳನ್ನು ಸ್ವೀಕರಿಸಲು ಪ್ರತಿ ಸಚಿವಾಲಯದಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಸಿಬ್ಬಂದಿ ಸಚಿವಾಲಯ ಗುರುವಾರ `ಸಾರ್ವಜನಿಕ ಹಿತಾಸಕ್ತಿಯುಳ್ಳ ಮಾಹಿತಿ ಮತ್ತು ಮಾಹಿತಿದಾರನ ಜೀವ ರಕ್ಷಣೆ' ನಿರ್ಣಯ ಅಧಿಸೂಚನೆ ಹೊರಡಿಸಿದೆ. ಉದ್ಯೋಗಿಗಳು ನೀಡುವ ರಹಸ್ಯ ಮಾಹಿತಿ ಅಥವಾ ಲಿಖಿತ ದೂರುಗಳನ್ನು ಸ್ವೀಕರಿಸಲು ಆಯಾ ಸಚಿವಾಲಯಗಳ ಮುಖ್ಯ ಜಾಗೃತ ಅಧಿಕಾರಿ (ಸಿವಿಒ) ಅಥವಾ ಇಲಾಖಾ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ. ಇಲ್ಲಿಯವರೆಗೂ ಕೇವಲ ಸಿವಿಒಗಳಿಗೆ ಮಾತ್ರ ಈ ಅಧಿಕಾರ ನೀಡಲಾಗಿತ್ತು.

ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಘ, ಸಂಸ್ಥೆಗಳು, ಸೊಸೈಟಿಗಳು, ಸ್ಥಳೀಯ ಸಂಸ್ಥೆಗಳ ನೋಡಲ್ ಅಧಿಕಾರಿಗಳು ಇಂತಹ ದೂರುಗಳನ್ನು ಸ್ವೀಕರಿಸುವ ಅಧಿಕಾರ ಹೊಂದಿರುತ್ತಾರೆ. ದೂರಿನ ಆಧಾರದ ಮೇಲೆ ಈ ನೋಡಲ್ ಅಧಿಕಾರಿಗಳು ಮಾಹಿತಿದಾರ, ಸಾಕ್ಷಿಗಳಿಗೆ ರಕ್ಷಣೆ ನೀಡುವ ಕುರಿತು ಕೇಂದ್ರ ಜಾಗೃತ ಆಯೋಗದ ಗಮನಕ್ಕೆ ತಂದು ನಿರ್ಧಾರವನ್ನು ಕೈಗೊಳ್ಳುತ್ತಾರೆ.

ರಹಸ್ಯ ಮಾಹಿತಿದಾರರ ದೂರುಗಳನ್ನು ವೇಗವಾಗಿ ಇತ್ಯರ್ಥಗೊಳಿಸುವ ಮತ್ತು ಭ್ರಷ್ಟಾಚಾರ ಪ್ರಕರಣಗಳಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವ ಬದಲಾವಣೆಗಳನ್ನು ಈ ತಿದ್ದುಪಡಿ ನಿರ್ಣಯದಲ್ಲಿ ಮಾಡಲಾಗಿದೆ.

ಮಾಹಿತಿದಾರ ನೀಡುವ ಮಾಹಿತಿ, ಅವರ ಗುರುತು ಹಾಗೂ ಇನ್ನಿತರ ವಿವರಗಳನ್ನು ಗೌಪ್ಯವಾಗಿ ಇಡುವ ಬಗ್ಗೆಯೂ ಕಟ್ಟುನಿಟ್ಟಾಗಿ ಈ ನಿರ್ಣಯದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.