ನವದೆಹಲಿ: ಫೇಸ್‌ಬುಕ್‌ನಲ್ಲಿ ಹೇಳಿಕೆ ದಾಖಲಿಸಿದ್ದಕ್ಕಾಗಿ ಮಹಾರಾಷ್ಟ್ರದಲ್ಲಿ ಇಬ್ಬರು ಯುವತಿಯರನ್ನು ಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ದುರ್ಬಳಕೆ ತಡೆಯಲು ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ.
ಯಾರೇ ಆಗಲಿ ಇಂಟರ್‌ನೆಟ್‌ನಲ್ಲಿ ಮುಜುಗರ ಅಥವಾ ಕಿರಿಕಿರಿ ಉಂಟು ಮಾಡುವ ಹೇಳಿಕೆ ದಾಖಲಿಸಿದ್ದಲ್ಲಿ ಅಂಥವರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ `66 ಎ' ಕಲಂ ಅನ್ವಯ ಪ್ರಕರಣ ದಾಖಲಿಸುವುದಾದಲ್ಲಿ, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡಿಸಿಪಿ ಮಟ್ಟದ ಅಧಿಕಾರಿಗಳ ಅನುಮತಿ ಪಡೆಯಲೇಬೇಕು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.
ಮೆಟ್ರೊಪಾಲಿಟನ್ ನಗರಗಳಲ್ಲಿ ಇಂತಹ ಪ್ರಕರಣ ದಾಖಲಿಸಬೇಕಾದಲ್ಲಿ ಐಜಿಪಿ ಮಟ್ಟದ ಅಧಿಕಾರಿಗಳು ಅನುಮತಿ ನೀಡಬೇಕಾಗುತ್ತದೆ. ವಿದ್ಯುನ್ಮಾನ ಸಂದೇಶಗಳ ಮೂಲಕ ದ್ವೇಷ ಬಿತ್ತುವಂತಹ ಕೃತ್ಯ ಕೈಗೊಂಡಲ್ಲಿ `66 ಎ' ಕಲಂ ಅನ್ವಯ ಪ್ರಕರಣ ದಾಖಲಿಸಬೇಕಾಗುತ್ತದೆ.
ಸುಪ್ರೀಂಕೋರ್ಟ್ ಕಳವಳ: ಫೇಸ್‌ಬುಕ್‌ನಲ್ಲಿ ಹೇಳಿಕೆಗಾಗಿ ಮಹಾರಾಷ್ಟ್ರದಲ್ಲಿ ಇಬ್ಬರು ಯುವತಿಯರನ್ನು ಬಂಧಿಸಿದ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಶ್ರೇಯಾ ಸಿಂಘಾಲ್ ಎಂಬ ದೆಹಲಿ ವಿದ್ಯಾರ್ಥಿನಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿಯ ಕುರಿತು ನಿರ್ಧಾರ ಕೈಗೊಳ್ಳಲು ನೆರವು ನೀಡುವಂತೆ ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಅವರಿಗೆ ಪೀಠ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.