ADVERTISEMENT

ಮಾಹಿತಿ ಮುಚ್ಚಿಟ್ಟ ಸರ್ಕಾರ: ವಿಪಕ್ಷಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್   

ನವದೆಹಲಿ: ಮೋಸುಲ್‌ನಿಂದ ಅ‍ಪಹೃತರಾದ ಭಾರತೀಯರು ಮೃತಪಟ್ಟಿರುವ ವಿಚಾರವು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಣ ಜಟಾಪಟಿಗೆ ಕಾರಣವಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ಬೆನ್ನಿಗೇ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

‘ಇಷ್ಟೊಂದು ಜನರು ಜೀವ ಕಳೆದುಕೊಂಡಿದ್ದಾರೆ ಎಂಬುದು ಬಹಳ ಬೇಸರದ ಸಂಗತಿ. ಆದರೆ ಸಂತ್ರಸ್ತ ಕುಟುಂಬಗಳು ಮತ್ತು ಸಂಸತ್ತನ್ನು ಇಷ್ಟು ವರ್ಷ ಸರ್ಕಾರ ತಪ್ಪುದಾರಿಗೆಳೆದದ್ದು ಯಾಕೆ? ಸಂತ್ರಸ್ತರಲ್ಲಿ ಹುಸಿ ನಿರೀಕ್ಷೆ ಹುಟ್ಟಿಸಿದ್ದು ಯಾಕೆ’ ಎಂದು ಕಾಂಗ್ರೆಸ್‌ ಮುಖಂಡ ಶಶಿ ತರೂರ್‌ ಪ್ರಶ್ನಿಸಿದ್ದಾರೆ.

ADVERTISEMENT

ಮೂರು ವರ್ಷಗಳಿಂದ ಸರ್ಕಾರ ಯಾಕೆ ಸುಳ್ಳು ಹೇಳುತ್ತಲೇ ಬಂದಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಪ್ರಶ್ನಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವಿನ ಜತೆಗೆ ಉದ್ಯೋಗವನ್ನೂ ಒದಗಿಸಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಒತ್ತಾಯಿಸಿದ್ದಾರೆ.

ಅಪಹೃತ ಭಾರತೀಯರ ಸಾವಿನ ಬಗ್ಗೆ ಹೇಳಿಕೆ ನೀಡಲು ಅವಕಾಶ ಕೊಡದೆ ಲೋಕಸಭೆಯಲ್ಲಿ ಗದ್ದಲ ಎಬ್ಬಿಸಿದ ಕಾಂಗ್ರೆಸ್‌ ಪಕ್ಷವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಟೀಕಿಸಿದ್ದಾರೆ. ‘ಸಾವಿನ ವಿಚಾರದಲ್ಲಿ ಕಾಂಗ್ರೆಸ್‌ ಅಗ್ಗದ ರಾಜಕಾರಣ ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

ನಾಪತ್ತೆಯಾದವರು ಮೃತಪಟ್ಟಿದ್ದಾರೆ ಎಂದು ಯಾವುದೇ ಪುರಾವೆ ಇಲ್ಲದೆ ಯಾವ ಸರ್ಕಾರವೂ ಘೋಷಿಸುವುದಿಲ್ಲ. ನಾಪತ್ತೆಯಾದವರು ಸತ್ತಿದ್ದಾರೆ ಎಂಬ ಸಿದ್ಧಾಂತವನ್ನು ತಮ್ಮ ಸರ್ಕಾರ ಒಪ್ಪುವುದಿಲ್ಲ. 39 ಮಂದಿಯ ಸಾವಿನ ಬಗ್ಗೆ ಹೇಳಿಕೆ ನೀಡಲು ಮುಂದಾದಾಗ ಗಲಾಟೆ ಮಾಡಿದ್ದು ಯಾಕೆ ಎಂಬುದನ್ನು ಕಾಂಗ್ರೆಸ್‌ ಪಕ್ಷ ವಿವರಿಸಬೇಕು ಎಂದು ಸುಷ್ಮಾ ಸ್ವರಾಜ್ ಆಗ್ರಹಿಸಿದ್ದಾರೆ.

ಯಾರಿಂದಲೂ ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ. ಸುಳ್ಳು ಹೇಳಿಲ್ಲ, ಅವಿಶ್ರಾಂತವಾಗಿ ಕೆಲಸ ಮಾಡಿ ಮೃತ ದೇಹಗಳ ಅವಶೇಷಗಳನ್ನು ಪತ್ತೆ ಮಾಡಲಾಗಿದೆ ಎಂದು ಸುಷ್ಮಾ ಹೇಳಿದ್ದಾರೆ.

ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮೂಲಕ ಉತ್ತರ ನೀಡಿದ್ದಾರೆ.

‘ಮೋಸುಲ್‌ನಲ್ಲಿ ಮೃತಪಟ್ಟವರಿಗಾಗಿ ಇಡೀ ಭಾರತ ಕಂಬನಿಗರೆಯುತ್ತಿದೆ. ಸಂತ್ರಸ್ತ ಕುಟುಂಬಗಳ ಜತೆ ಇಡೀ ದೇಶವೇ ಇದೆ. ವಿದೇಶಗಳಲ್ಲಿರುವ ನಮ್ಮ ಸಹೋದರ ಸಹೋದರಿಯರ ರಕ್ಷಣಗೆ ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಮೋದಿ ಹೇಳಿದ್ದಾರೆ.

‘ಬಹುಶಃ, ರಾಜ್ಯಸಭೆಯಲ್ಲಿ ಯಾಕೆ ಗದ್ದಲವಾಗಲಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷರು ಯೋಚಿಸಿರಬೇಕು. ಹಾಗಾಗಿ ಲೋಕಸಭೆಯಲ್ಲಿ ಗದ್ದಲ ಎಬ್ಬಿಸುವಂತೆ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸೂಚಿಸಿರಬೇಕು’ ಎಂದು ಸುಷ್ಮಾ ಹೇಳಿದ್ದಾರೆ.

‘ಸಂಸತ್ತಿನಲ್ಲಿ ಘೋಷಿಸುವುದಕ್ಕೆ ಮೊದಲು ತಮಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಮೃತರಲ್ಲಿ ಕೆಲವರ ಸಂಬಂಧಿಕರು ಪ್ರಶ್ನಿಸಿದ್ದಾರೆ. ಆದರೆ, ಸಂಸತ್ತಿಗೆ ಮೊದಲು ಮಾಹಿತಿ ನೀಡುವುದು ಸಂಸದೀಯ ಪ್ರಜಾಸತ್ತೆಯ ಶಿಷ್ಟಾಚಾರವಾಗಿದೆ. ಹಾಗಾಗಿ ನಾನು ನನ್ನ ಕರ್ತವ್ಯ ನಿಭಾಯಿಸಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸುಷ್ಮಾ ತಿಳಿಸಿದರು.

‘ಅಪಹೃತರು ಜೀವಂತ ಇದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದೇ ನಾವು ಹೇಳಿಕೊಂಡು ಬಂದಿದ್ದೇವೆ. 2014ರಲ್ಲಿ ಹೇಳಿದ್ದನ್ನೇ 2017ರಲ್ಲಿಯೂ ಹೇಳಿದ್ದೇವೆ. ಮಾಹಿತಿಯನ್ನು ಯಾರಿಂದಲೂ ಮುಚ್ಚಿಟ್ಟಿಲ್ಲ. ಯಾರಲ್ಲಿಯೂ ಹುಸಿ ನಿರೀಕ್ಷೆ ಹುಟ್ಟಿಸಿಲ್ಲ’ ಎಂದು ಹೇಳುವ ಮೂಲಕ ವಿರೋಧ ಪಕ್ಷಗಳ ಆಕ್ಷೇಪಕ್ಕೆ ಅವರು ಉತ್ತರವನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.