ADVERTISEMENT

ಮಿಗ್-29 ಭಗ್ನಾವಶೇಷ ಪತ್ತೆ: ಪೈಲಟ್‌ಗಾಗಿ ಶೋಧ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:35 IST
Last Updated 27 ಅಕ್ಟೋಬರ್ 2011, 19:35 IST

ನವದೆಹಲಿ:  ಹಿಮಾಲಯದ ಎತ್ತರ ಪ್ರದೇಶದಲ್ಲಿ ಅಪಘಾತಕ್ಕೆ ಒಳಗಾಗಿದ್ದ ನತದೃಷ್ಟ ಮಿಗ್-29 ವಿಮಾನದ ಭಗ್ನಾವಶೇಷಗಳನ್ನು ಹತ್ತು ದಿನಗಳ ಬಳಿಕ ಭಾರತೀಯ ವಾಯು ಪಡೆ ಪತ್ತೆ ಹಚ್ಚಿದೆ. ಆದರೆ ಪೈಲಟ್ ಡಿ.ಎಸ್. ತೋಮರ್ ಅವರನ್ನು ಇನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಶೋಧ ಮುಂದುವರಿದಿದೆ.

ಸಮುದ್ರ ಮಟ್ಟಕ್ಕಿಂತ 15,000 ಅಡಿ ಎತ್ತರದಲ್ಲಿ ಅಪಘಾತ ಸಂಭವಿಸಿದ್ದು ಇದು ಹಿಮಾಚಲ ಪ್ರದೇಶದ ಲಹಾಲ್ ಕಣಿವೆಯ ಚೊಕ್‌ಹಾಂಗ್ ಗ್ರಾಮದ ಸಮೀಪವಿದೆ. ಹಿಮದಡಿ ವಿಮಾನದ ಕೆಲವು ಭಾಗಗಳು ಪತ್ತೆಯಾಗಿವೆ.

ಐಎಎಫ್ ಮತ್ತು ಸೇನೆಯ ಪರ್ವತಾರೋಹಿಗಳ ತಂಡವು ಅಪಘಾತದ ಸ್ಥಳ ಗುರುತಿಸುವ ಕಾರ್ಯದಲ್ಲಿ ನಿರತವಾಗಿತ್ತು. ಅಪಘಾತ ಸ್ಥಳದಿಂದ 200 ಮೀಟರ್ ಎತ್ತರದ ಪರ್ವತದ ಸಾಲಿನಲ್ಲಿ ಈ ತಂಡ ಬೇಸ್ ಕ್ಯಾಂಪ್‌ನ ಯಾವುದೇ ನೆರವಿಲ್ಲದೆ ಇಡೀ ರಾತ್ರಿ ಕಳೆದಿತ್ತು.

ಈ ತಿಂಗಳ 18ರ ರಾತ್ರಿ ತೋಮರ್ ಅವರು ಮಿಗ್-29 ವಿಮಾನದಲ್ಲಿ ಹಾರಾಟ ನಡೆಸಿದ್ದರು. ಲಹಾಲ್ ಕಣಿವೆಯಲ್ಲಿ ಹಾರಾಟ ನಡೆಸುವಾಗ ಇದ್ದಕ್ಕಿದ್ದಂತೆ ಅವರು ನಿಯಂತ್ರಣ ಕೊಠಡಿಯೊಂದಿಗಿನ ತಮ್ಮ ರೇಡಿಯೊ ಸಂಪರ್ಕ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.