ADVERTISEMENT

ಮೀನುಗಾರರ ಹತ್ಯೆ ಎನ್‌ಐಎಗೆ ಪ್ರಕರಣ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಇಟಲಿ ನೌಕಾಪಡೆ ಯೋಧರಿಂದ ಹತ್ಯೆಗೀಡಾದ ಕೇರಳದ ಇಬ್ಬರು ಮೀನುಗಾರರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ (ಎನ್‌ಐಎ) ವರ್ಗಾಯಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.

ವಿದೇಶಿ ಯೋಧರ  ವಿಚಾರಣೆ ಕೇರಳ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಹೇಳಿದ್ದ ಬೆನ್ನಲ್ಲೇ, ಗೃಹ ಸಚಿವಾಲಯ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿದೆ.

ಪ್ರಕರಣ ತನಿಖೆಯನ್ನು ಆರಂಭದಿಂದ ನಡೆಸಲಿರುವ ಎನ್‌ಐಎ, ಆರೋಪ ಪಟ್ಟಿಯನ್ನು ಎನ್‌ಐಎ ವಿಶೇಷ ಕೋರ್ಟ್ ಅಥವಾ ಸುಪ್ರೀಂಕೋರ್ಟ್ ಸಲಹೆ ಮೇರೆಗೆ ಸರ್ಕಾರ ಸ್ಥಾಪಿಸುವ ಮತ್ಯಾವುದೇ ವಿಶೇಷ ಕೋರ್ಟ್‌ನಲ್ಲಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದ ವಿಚಾರಣೆಯನ್ನು ವಿಶೇಷ ಕೋರ್ಟ್ ಸ್ಥಾಪಿಸಿ ಇತ್ಯರ್ಥಪಡಿಸುವುದಕ್ಕೆ ಬದಲಾಗಿ, ಈಗಾಗಲೇ ಇರುವ  ಎನ್‌ಐಎ ಕೋರ್ಟ್‌ನಲ್ಲೇ ನಡೆಸಬಹುದು ಎಂದು ಗೃಹ ಸಚಿವಾಲಯ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ.

ಇಟಲಿಯ ನೌಕಾ ಯೋಧರಾದ ಮಿಸ್ಸಿಮಿಲಿಯಾನೊ ಲೊಟ್ಟೊರೆ ಮತ್ತು ಸಾಲ್ವಟೋರ್ ಗಿರ್ಯೋನೆ ಅವರು ಕಳೆದ ವರ್ಷ ಕೇರಳದ ಇಬ್ಬರು ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪು ಭಾವಿಸಿ ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.