ADVERTISEMENT

ಮುಂಜಾಗ್ರತಾ ವಶ: ಎತ್ತಿಹಿಡಿದ ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2011, 19:30 IST
Last Updated 25 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ಹೊಸ ಅಪರಾಧಿ ಚಟುವಟಿಕೆಗಳಲ್ಲಿ ತೊಡಗುವ ಗೂಂಡಾಗಳು ಮತ್ತು ಸಮಾಜ ವಿದ್ರೋಹಿಗಳನ್ನು ಮುಂಜಾಗ್ರತಾ ವಶ ಸುಗ್ರೀವಾಜ್ಞೆಯಡಿ ವಶದಲ್ಲಿ ಇರಿಸಿಕೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಆರೋಪಿಯ ಮುಂಜಾಗ್ರತಾ ವಶವನ್ನು ದೃಢೀಕರಿಸುವ ಮುನ್ನ ಆತನ ಹೇಳಿಕೆಯನ್ನು ಸರ್ಕಾರ ಆಲಿಸಬೇಕೆಂಬುದು ಸಾಂವಿಧಾನಿಕ ಬಾಧ್ಯತೆ ಏನೂ ಅಲ್ಲ. ಆದರೆ ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಸಂಬಂಧಿಸಿದ ಇಲಾಖೆಯು ಆದೇಶ ಹೊರಡಿಸಿದ ಮೇಲೆ ಆರೋಪಿಯ ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಪಿ.ಸದಾಶಿವಂ ಮತ್ತು ಬಿ.ಎಸ್. ಚೌಹಾಣ್ ಅವರನ್ನು ಒಳಗೊಂಡ ನ್ಯಾಯಪೀಠ ಹೀಗೆ ಹೇಳಿದೆ.

ಹಲವು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಡಿ.ಎಂ.ನಾಗರಾಜ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಪೀಠ ಹೀಗೆ ಹೇಳಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರು ಈತನ ವಶಕ್ಕೆ ತೆಗೆದುಕೊಳ್ಳಲು 2010ರ ಸೆ.22ರಂದು ಸೂಚಿಸಿದ್ದರು. ಅಕ್ರಮ ಸಾರಾಯಿ ತಯಾರಿಕೆ, ಜೂಜು, ಗುಂಡಾ, ನಿಯಮಬಾಹಿರ ಮಾನವ ಸಾಗಣೆ, ಕೊಳಗೇರಿ ಕಬಳಿಕೆ ಆರೋಪಗಳಡಿ ಒಂದು ವರ್ಷದ ಅವಧಿಗೆ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ಇದನ್ನು ಆತ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ತನ್ನನ್ನು ವಶಕ್ಕೆ ತೆಗೆದುಕೊಳ್ಳುವ ಮುನ್ನ ನನ್ನ ಮನವಿಯನ್ನು ಜೈಲಿನ ಅಧಿಕಾರಿಗಳು ಪರಿಗಣಿಸಲಿಲ್ಲ. ಇದರಿಂದ ತನ್ನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಆತ ವಾದಿಸಿದ್ದ. ಆದರೆ ಹೈಕೋರ್ಟ್ ಆತನ ವಾದವನ್ನು ಅನೂರ್ಜಿತಗೊಳಿಸಿತ್ತು.

ಅಪರಾಧ ಎಸಗುವಿಕೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ನಿಯಮಗಳನ್ನು ಉಲ್ಲಂಘಿಸುವುದನ್ನೇ ಚಟ ಮಾಡಿಕೊಂಡಿದ್ದರಿಂದ ಆತನನ್ನು ವಶಕ್ಕೆ ತೆಗೆದುಕೊಂಡಿದ್ದ ಸರಿ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹೇಳಿದರು.

ಕೊಲೆ, ಕೊಲೆ ಯತ್ನ, ಡಕಾಯಿತಿ, ದೊಂಬಿ ಎಬ್ಬಿಸುವುದು, ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ. ಭೂವಿವಾದ ಬಗೆಹರಿಸುವಾಗ ಸುಲಿಗೆ ಇನ್ನಿತರ ಆರೋಪಗಳಡಿ ನಾಗರಾಜನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. 1981ರಿಂದ 2010ರ ಅವಧಿಯಲ್ಲಿ ಆತ ಈ ಕುಕೃತ್ಯಗಳನ್ನು ಎಸಗಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.