ADVERTISEMENT

ಮುಂದೂಡಲು ಭಾರತ ಪ್ರಸ್ತಾವ

ಪಾಕ್‌ ನ್ಯಾಯಾಂಗ ಆಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಮುಂಬೈ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಗಳ ಪಾಟೀ ಸವಾಲು ನಡೆಸಲಿರುವ ಪಾಕಿಸ್ತಾನದ ನ್ಯಾಯಾಂಗ ಆಯೋಗದ ಭಾರತ ಭೇಟಿಯನ್ನು ಸೆ 19 ನಂತರ ಕೈಗೊಳ್ಳುವ ಪ್ರಸ್ತಾವವನ್ನು ಪಾಕ್‌ ಮುಂದಿಟ್ಟಿರುವುದಾಗಿ ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್ ಶಿಂಧೆ ಬುಧವಾರ ಹೇಳಿದ್ದಾರೆ.

ಮುಂಬೈನಲ್ಲಿ ಗಣೇಶ ಚತುರ್ಥಿ ಅತಿದೊಡ್ಡ ಹಬ್ಬವಾಗಿರುವ ಕಾರಣ ನ್ಯಾಯಾಂಗ ಆಯೋಗದ ಭೇಟಿಯನ್ನು ಮುಂದೂಡುವಂತೆ ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಆಯೋಗದ ಎರಡನೇ ಭಾರತ ಭೇಟಿಗೆ ಸೆ.7 ನಿಗದಿಯಾಗಿತ್ತು.    ಆದರೆ, ಪಾಕ್‌ ಹಿಂದೆ ಸರಿದಿದ್ದರಿಂದ ಭೇಟಿಯನ್ನು ಸೆ. 11ಕ್ಕೆ ಮುಂದೂಡ­ಲಾಗಿತ್ತು.

ಉಗ್ರ ಅಜ್ಮಲ್‌ ಕಸಬ್‌ನ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಂಡಿರುವ ಮೆಟ್ರೊ­ಪಾಲಿಟಿನ್‌ ಮ್ಯಾಜಿಸ್ಟ್ರೇಟ್‌ ರಾಮಾ ವಿಜಯ ಸಾವಂತ ವಾಗುಳೆ, ಪ್ರಕರಣದ ಮುಖ್ಯ ತನಿಖಾಧಿಕಾರಿ ರಮೇಶ ಮಹಾಲೆ, ನಯ್ಯರ್‌ ಹಾಗೂ ಜೆ.ಜೆ. ಆಸ್ಪತ್ರೆಯ ಇಬ್ಬರು ವೈದ್ಯರು ಪ್ರಕರಣದ ಸಾಕ್ಷಿಗಳು.

‘ಯಾರನ್ನಾದರೂ ಪ್ರಧಾನಿ ಅಭ್ಯರ್ಥಿ ಮಾಡಬಹುದು’
ನವದೆಹಲಿ (ಪಿಟಿಐ):
ಗುಜರಾತ್‌ ಮುಖ­್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ, ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ, ‘ರಾಜಕೀಯ ಪಕ್ಷಗಳು ರಾಮು, ಶ್ಯಾಮು ಅಥವಾ ದಾಮು... ಹೀಗೆ ಯಾರನ್ನಾ­ದರೂ ತಮ್ಮ ನಾಯಕ ಎಂದು ಘೋಷಿಸಬಹುದು’ ಎಂದು ವ್ಯಂಗ್ಯವಾಡಿದ್ದಾರೆ.

2014ರಲ್ಲಿ ನಡೆಯಲಿರುವ ಲೋಕ­ಸಭಾ ಮುಂಚಿತವಾಗಿ ಯಾವುದೇ ಸಣ್ಣ ಅಥವಾ ದೊಡ್ಡ ರಾಜಕೀಯ ಪಕ್ಷ, ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸ­ಬಹುದು ಎಂದು ಶಿಂಧೆ ಹೇಳಿದರು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲು ಮುಂದಾಗಿರುವ ಬಿಜೆಪಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ಕೋಯಿ ಭಿ ರಾಮು, ಶ್ಯಾಮು ಔರ್‌ ದಾಮು ಕಾ ನಾಮ್‌ ಲೇ ಸಕ್ತೆ ಹೈ’ ಎಂದು ಶಿಂಧೆ ಉತ್ತರಿಸಿದರು. ‘ಆದರೆ, ನಾವು (ಕಾಂಗ್ರೆಸ್‌) ಈಗಾಗಲೇ ರಾಹುಲ್‌ ಗಾಂಧಿ ಅವರನ್ನು ನಮ್ಮ ನಾಯಕ ಎಂದು ಘೋಷಿಸಿದ್ದೇವೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT