ADVERTISEMENT

ಮುಖ್ಯ ಚುನಾವಣಾ ಆಯುಕ್ತರ ನೇಮಕ;ಉನ್ನತ ಮಟ್ಟದ ಮಂಡಳಿಗೆ ಖುರೇಷಿ ಒಲವು

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST

ನವದೆಹಲಿ (ಪಿಟಿಐ): ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಉನ್ನತ ಮಟ್ಟದ ಮಂಡಳಿ ರಚಿಸುವಂತಹ ಪ್ರಸ್ತಾವ ಉತ್ತಮವಾದುದು ಎಂದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣಾ ಸುಧಾರಣೆ ಕುರಿತಂತೆ ಇಲ್ಲಿ ಭಾನುವಾರ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, `ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಉನ್ನತ ಮಟ್ಟದ ಮಂಡಳಿ ರಚಿಸುವುದು ಉತ್ತಮ ಕಾರ್ಯ. ಇದರಿಂದ ಸ್ವಜನ ಪಕ್ಷಪಾತದ ಆರೋಪಗಳಿಗೆ ಅವಕಾಶ ಇರುವುದಿಲ್ಲ~ ಎಂದರು.

`ಉನ್ನತ ಮಟ್ಟದ ಮಂಡಳಿಯಿಂದ ಮುಖ್ಯ ಚುನಾವಣಾ ಆಯುಕ್ತರ ನೇಮಕವಾದುದ್ದೇ ಆದರೆ ಅವರಿಗೆ ಹೆಚ್ಚಿನ ಅಧಿಕಾರದ ಭಾವನೆ ಮೂಡುತ್ತದೆ. ಉನ್ನತ ಮಟ್ಟದ ಮಂಡಳಿ ರಚಿಸುವುದನ್ನು ನಾನು ಅಧಿಕಾರದಲ್ಲಿದ್ದಾಗಲೂ ಪ್ರತಿಪಾದಿಸಿದ್ದೆ~ ಎಂದರು.

`ಎಲ್ಲಾ ರೀತಿಯ ಅಕ್ರಮಗಳಿಗೆ ಕಡಿವಾಣ ಬೀಳಬೇಕಿದ್ದರೆ ಮತದಾರರು ಜಾಗೃತರಾಗಬೇಕು. ಜಾಗೃತಿ ಮೂಡಿಸುವಂತಹ ಕೆಲಸಗಳು ಹೆಚ್ಚು ಹೆಚ್ಚು ನಡೆಯುಬೇಕು~ ಎಂದು ಹೇಳಿದರು.`ಭಾರತದಂತಹ ದೊಡ್ಡ ದೇಶದಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಯನ್ನು ತಿರಸ್ಕರಿಸುವಂತಹ ನಕಾರಾತ್ಮಕ ಮತದಾನದ ಹಕ್ಕು ಅಥವಾ ಅಭ್ಯರ್ಥಿಯನ್ನು ವಾಪಸು ಕರೆಯಿಸಿಕೊಳ್ಳುವಂತಹ ಹಕ್ಕನ್ನು ಮಾನ್ಯ ಮಾಡುವುದು ಕಾರ್ಯಸಾಧುವಾಗಲಾರದು. ಜೊತೆಗೆ ಸ್ಥಳೀಯ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆ ಉಂಟಾಗುತ್ತದೆ~ ಎಂದೂ ಖುರೇಷಿ ಅಭಿಪ್ರಾಯಪಟ್ಟರು.

ಮುಖ್ಯ ಚುನಾವಣಾ ಆಯುಕ್ತರು, ಮಹಾಲೇಖಪಾಲರನ್ನು (ಸಿಎಜಿ) ನೇಮಕ ಮಾಡಲು ಉನ್ನತ ಮಟ್ಟದ ಮಂಡಳಿಯೊಂದನ್ನು ರಚಿಸುವಂತೆ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರು ಇತ್ತೀಚೆಗೆ ಪ್ರಧಾನಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಇದನ್ನು ಡಿಎಂಕೆ ಮತ್ತು ಸಿಪಿಎಂ ಕೂಡ ಬೆಂಬಲಿಸಿದ್ದವು. ಖುರೇಷಿ ಅವರು ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ನಿವೃತ್ತರಾಗುವುದಕ್ಕೂ ಮುನ್ನ (ಜೂನ್) ಅಡ್ವಾಣಿ ಈ ಒತ್ತಾಯ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.