ADVERTISEMENT

ಮುಚ್ಚಳಿಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2012, 19:30 IST
Last Updated 8 ಜನವರಿ 2012, 19:30 IST

ನವದೆಹಲಿ (ಪಿಟಿಐ): ವಿದೇಶಗಳ ಬ್ಯಾಂಕುಗಳಲ್ಲಿರುವ ಕಪ್ಪುಹಣದ ರಹಸ್ಯ ಖಾತೆಗಳ ಮಾಹಿತಿ ಪಡೆಯಬಯಸುವ ಯಾವುದೇ ಸರ್ಕಾರಿ ಸಂಸ್ಥೆ ಅಥವಾ ಇಲಾಖೆಯಿಂದ, ಆ ಮಾಹಿತಿ ಸೋರಿಕೆಯಾಗದಂತೆ ಖಾತ್ರಿಗೊಳಿಸಿಕೊಳ್ಳಲು ಮುಚ್ಚಳಿಕೆ ಬರೆಸಿಕೊಳ್ಳುವಂತೆ ಆದಾಯ ತೆರಿಗೆ ಇಲಾಖೆಗೆ ಕೇಂದ್ರ ನೇರ ತೆರಿಗೆ ಮಂಡಲಿ (ಸಿಬಿಡಿಟಿ) ಆದೇಶಿಸಿದೆ.

ಈ ಹೆಸರುಗಳು ಸೋರಿಕೆಯಾಗಿ, ಪ್ರಚಾರಗೊಂಡರೆ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯಂತಹ ಜಾಗತಿಕ ಹಣಕಾಸು ಸಂಸ್ಥೆಗಳು ಹಾಗೂ ತೆರಿಗೆ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿರುವ ಇತರ ರಾಷ್ಟ್ರಗಳು ಅದಕ್ಕೆ ವಿರೋಧ ವ್ಯಕ್ತಪಡಿಸಬಹುದು ಎಂಬುದು ಸಿಬಿಡಿಟಿ ಯೋಚನೆ ಆಗಿದೆ.

ಭಾರತೀಯರು ಜರ್ಮನಿಯ ಲೀಚ್ಟೆನ್‌ಸ್ಟೀನ್ ಎಲ್‌ಜಿಟಿ ಬ್ಯಾಂಕುಗಳಲ್ಲಿ ಇರಿಸಿರುವ ಕಪ್ಪುಹಣ ಹಾಗೂ ಇನ್ನಿತರ ವಿದೇಶಿ ಬ್ಯಾಂಕುಗಳಲ್ಲಿ ಹೊಂದಿರುವ ಅಕ್ರಮ ಠೇವಣಿಯ ಬಗ್ಗೆ 9900 ಮಾಹಿತಿಗಳನ್ನು ಸಿಬಿಡಿಟಿ ಹೊಂದಿದೆ.
ತೆರಿಗೆ ಲೆಕ್ಕದ ಉದ್ದೇಶಕ್ಕಾಗಿ ಹಾಗೂ ತೆರಿಗೆ ವಂಚನೆ ತನಿಖೆಗಾಗಿ ಮಾತ್ರ ಈ ಮಾಹಿತಿ ಬಳಸುವುದಾಗಿ ಮುಚ್ಚಳಿಕೆ ಪಡೆಯಬೇಕು. ಜತೆಗೆ, ಪಡೆದ ಮಾಹಿತಿಯ ಗೋಪ್ಯತೆ ಕಾಪಾಡುವುದು ಅದನ್ನು ಪಡೆದ ಅಧಿಕಾರಿಯ ಹೊಣೆಯಾಗಬೇಕು ಎಂದು ಸಿಬಿಡಿಟಿ ಸ್ಪಷ್ಟಪಡಿಸಿದೆ.

ಇದೀಗ ಈ ಮಾಹಿತಿಯನ್ನು ದೆಹಲಿ, ಮುಂಬೈ, ಕೊಚ್ಚಿ, ಅಹಮದಾಬಾದ್ ಮತ್ತಿತರ ಕಡೆಯ ಆದಾಯ ತೆರಿಗೆ ತನಿಖಾ ಘಟಕಗಳಿಗೆ ರವಾನಿಸಿದೆ. ಜತೆಗೆ ಹೊಸದಾಗಿ ರಚಿಸಲಾಗಿರುವ ಅಪರಾಧ ತನಿಖಾ ನಿರ್ದೇಶನಾಲಯ (ಆದಾಯ ತೆರಿಗೆ), ತೆರಿಗೆ ಅಂದಾಜು ಘಟಕ ಮತ್ತು ಅಂತರರಾಷ್ಟ್ರೀಯ ತೆರಿಗೆ ಘಟಕಗಳಿಗೆ ಕೂಡ ಈ ಮಾಹಿತಿಯ ಅಗತ್ಯವಿದೆ.

ವಿದೇಶಗಳಲ್ಲಿ ಕಪ್ಪುಹಣ ಇರಿಸಿರುವವರ ಹೆಸರುಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕೆಲವು ದಿನಗಳಿಂದ ಪದೇ ಪದೇ ಹೇಳುತ್ತಿದ್ದಾರೆ. ಸದನದಲ್ಲಿ ಕೂಡ ಇದನ್ನು ಸ್ಪಷ್ಟಪಡಿಸಿದ್ದ ಅವರು, ರಹಸ್ಯ ಖಾತೆಗಳ ಮಾಹಿತಿ ಸೋರಿಕೆಯಾದರೆ ದ್ವಿ ತೆರಿಗೆ ತಡೆ ಒಪ್ಪಂದವನ್ನು ಉಲ್ಲಂಘಿಸಿದಂತಾಗುತ್ತದೆ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.