ನವದೆಹಲಿ (ಪಿಟಿಐ): ರಾಷ್ಟ್ರಪತಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಚಲಾಯಿಸಿದ ಮತ ಕುಲಗೆಟ್ಟಿದೆ ಎಂದಿರುವ ಚುನಾವಣಾ ಆಯೋಗ, ಅದನ್ನು ತಿರಸ್ಕರಿಸಿದೆ.
`ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮ 1974ರ 15ನೇ ಅಧಿನಿಯಮದ ಅನ್ವಯ ಎರಡನೇ ಮತಪತ್ರ ಪಡೆಯಲು ಮುಲಾಯಂ ಅವರಿಗೆ ಅವಕಾಶ ಇಲ್ಲ. ಆದ್ದರಿಂದ ಅವರು ಚಲಾವಣೆ ಮಾಡಿದ ಎರಡನೇ ಮತಪತ್ರವನ್ನು ಎಣಿಕೆಗೆ ಪರಿಗಣಿಸಬಾರದು~ ಎಂದು ಚುನಾವಣಾ ಆಯೋಗ ಹೇಳಿದೆ.
`ಹಾಗೆಯೇ ಅವರಿಗೆ ನೀಡಲಾಗಿದ್ದ ಮೊದಲ ಮತಪತ್ರ ಕುಲಗೆಟ್ಟ ಕಾರಣ (ಮತಪತ್ರದ ಗೋಪ್ಯತೆಗೆ ಧಕ್ಕೆ) ಅದನ್ನೂ ಎಣಿಕೆಗೆ ಪರಿಗಣಿಸಬಾರದು~ ಎಂದು ನಿರ್ದೇಶನ ನೀಡಿದೆ.
ಗುರುವಾರ ನಡೆದ ಮತದಾನದಲ್ಲಿ ಮುಲಾಯಂ ಮೊದಲಿಗೆ, ಮತಪತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಎ.ಸಂಗ್ಮಾ ಹೆಸರಿದ್ದ ಕಡೆ ಗುರುತು ಹಾಕಿದರು.
ಈ ಅಚಾತುರ್ಯ ಅರಿತ ಮುಲಾಯಂ, ಆ ಮತಪತ್ರ ಹರಿದು ಮತಗಟ್ಟೆ ಅಧಿಕಾರಿಗೆ ನೀಡಿದರು. ನಂತರ ಮತ್ತೊಂದು ಮತಪತ್ರ ಪಡೆದು ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರಿಗೆ ಮತ ಚಲಾವಣೆ ಮಾಡಿದ್ದರು.
ಮುಲಾಯಂ ಅವರಿಗೆ ಎರಡನೇ ಮತಪತ್ರ ನೀಡಿ, ಮತ್ತೆ ಮತ ಚಲಾವಣೆಗೆ ಅವಕಾಶ ಕಲ್ಪಿಸಿದ್ದು ನಿಯಮ ಬಾಹಿರ ಎಂದು ಸಂಗ್ಮಾ ಅವರ ಮತಗಟ್ಟೆ ಪ್ರತಿನಿಧಿ (ಏಜೆಂಟ್) ಸತ್ಯಪಾಲ್ ಜೈನ್ ಅವರು ಚುನಾವಣಾ ಅಧಿಕಾರಿ ವಿ.ಕೆ. ಅಗ್ನಿಹೋತ್ರಿ ಅವರಿಗೆ ಲಿಖಿತವಾಗಿ ದೂರು ನೀಡಿದ್ದರು.
ಮುಲಾಯಂ ಚಲಾಯಿಸಿದ ಎರಡನೇ ಮತಪತ್ರ ರದ್ದುಗೊಳಿಸಲು ಕೋರಿದ್ದರು. ಅಗ್ನಿಹೋತ್ರಿ ಈ ದೂರು ಪತ್ರ ಲಗತ್ತಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.