ADVERTISEMENT

ಮುಳುಗಿದ ದೋಣಿ: ನಾಲ್ವರ ರಕ್ಷಣೆ, ಇಬ್ಬರಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಮುಳುಗಿದ ಮೀನುಗಾರಿಕಾ ದೋಣಿ
ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಮುಳುಗಿದ ಮೀನುಗಾರಿಕಾ ದೋಣಿ   

ಕಾರವಾರ: ಹೊನ್ನಾವರ ಭಾಗದಲ್ಲಿ ಮೀನುಗಾರಿಕೆ ನಡೆಸಿ ತಮಿಳುನಾಡಿಗೆ ವಾಪಸಾಗುತ್ತಿದ್ದ ಎರಡು ಮೀನುಗಾರಿಕಾ ದೋಣಿಗಳ ಪೈಕಿ ಒಂದು ಅರಬ್ಬಿ ಸಮುದ್ರದಲ್ಲಿ ಮಂಗಳವಾರ ಮುಳುಗಿದೆ. ಅದರಲ್ಲಿದ್ದ ನಾಲ್ವರನ್ನು ಕರಾವಳಿ ರಕ್ಷಣಾ ಪಡೆಯವರು ರಕ್ಷಿಸಿದ್ದು, ಇಬ್ಬರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಕಡಲ ಕಿನಾರೆಯಿಂದ 21 ನಾಟಿಕಲ್ ಮೈಲು (39 ಕಿ.ಮೀ) ದೂರದಲ್ಲಿ ಈ ಅವಘಡ ಸಂಭವಿಸಿದೆ. ಇವು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪೂದುರೈಯ ಸಿಲುವೈ ಪಿಳೈ ಎಂಬುವರಿಗೆ ಸೇರಿದ ‘ಏಂಜೆಲ್ 1’ ಮತ್ತು ‘ಏಂಜೆಲ್ 2’ ದೋಣಿಗಳಾಗಿವೆ. ಮುಳುಗಿದ ‘ಏಂಜೆಲ್–1’ರಲ್ಲಿ ಆರು ಮಂದಿ ಹಾಗೂ ಸಮುದ್ರದಲ್ಲಿ ನಿಂತಿದ್ದ ‘ಏಂಜೆಲ್– 2’ನಲ್ಲಿ ಏಳು ಮಂದಿ ಮೀನುಗಾರರಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಸಂತೋಷ ಕೊಪ್ಪದ, ‘ಸೆಬಾಸ್ಟಿಯನ್, ಜೆಗದಾಸ್, ಶಿಜಾನ್, ತತೆಯೂಸ್ ಅವರನ್ನು ರಕ್ಷಿಸಲಾಗಿದೆ. ಎಲ್ಲರೂ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದಾರೆ. ಅವರಿಗೆ ಹೊನ್ನಾವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅರುಳ್‌ರಾಜ್ ಮತ್ತು ಪುಷ್ಪರಾಜ್ ಎಂಬುವವರಿಗಾಗಿ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಅವಘಡಕ್ಕೆ ನಿರ್ದಿಷ್ಟ ಕಾರಣವೇನೆಂಬುದು ಮೀನುಗಾರರ ವಿಚಾರಣೆಯಿಂದ ತಿಳಿಯಬೇಕಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.