ADVERTISEMENT

ಮೂರು ತಿಂಗಳಲ್ಲಿ ಶಾಲಾ ಸುರಕ್ಷತೆ ಮಾರ್ಗದರ್ಶಿ

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಪಿಟಿಐ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಮೂರು ತಿಂಗಳಲ್ಲಿ ಶಾಲಾ ಸುರಕ್ಷತೆ ಮಾರ್ಗದರ್ಶಿ
ಮೂರು ತಿಂಗಳಲ್ಲಿ ಶಾಲಾ ಸುರಕ್ಷತೆ ಮಾರ್ಗದರ್ಶಿ   

ನವದೆಹಲಿ: ಶಾಲೆಗಳಲ್ಲಿ ಸುರಕ್ಷತೆಯ ಮಾರ್ಗದರ್ಶಿಸೂತ್ರಗಳಿಗೆ ಸಂಬಂಧಿಸಿ ಮೂರು ತಿಂಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಗುರುಗ್ರಾಮ ಶಾಲೆಯಲ್ಲಿ ಮೃತಪಟ್ಟ ಎಂಟು ವರ್ಷದ ಬಾಲಕನ ತಂದೆ ಮತ್ತು ಕೆಲವು ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವು ಸರ್ಕಾರಿ ಮತ್ತು ಖಾಸಗಿ ಶಾಲೆಗಳೆರಡಕ್ಕೂ ಅನ್ವಯ ಆಗಬೇಕು ಎಂದು ತಿಳಿಸಲಾಗಿದೆ.

ಶಾಲೆಯ ಸುರಕ್ಷತಾ ವ್ಯವಸ್ಥೆ ಹೇಗಿರಬೇಕು ಎಂಬ ಮಾರ್ಗದರ್ಶಿಸೂತ್ರಗಳನ್ನು ರೂಪಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಪರಿಣತಿ ಇಲ್ಲ. ಹಾಗಾಗಿ ಸರ್ಕಾರವೇ ಮಾರ್ಗದರ್ಶಿಸೂತ್ರ ರಚಿಸುವುದು ಉತ್ತಮ ಎಂದು ನ್ಯಾಯಮೂರ್ತಿಗಳಾದ ಆದರ್ಶ ಕುಮಾರ್‌ ಗೋಯಲ್‌ ಮತ್ತು ಆರ್‌.ಎಫ್‌. ನಾರಿಮನ್‌ ಅವರ ಪೀಠ ಹೇಳಿದೆ.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ನಿಯಮಗಳನ್ನು ಕ್ರೋಡೀಕರಿಸಿ ಸಲ್ಲಿಸುವಂತೆ ಪೀಠವು ಹಿಂದೆ ಸೂಚಿಸಿತ್ತು. ಶಾಲೆಗಳಲ್ಲಿ ಸುರಕ್ಷತೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆಯೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು.

ಕರ್ನಾಟಕ, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಸರ್ಕಾರಗಳು ಮಾತ್ರ ಪ್ರತಿಕ್ರಿಯೆ ನೀಡಿದ್ದವು.

ಲೈಂಗಿಕ ಕಿರುಕುಳ ಮತ್ತು ಕೊಲೆಯಂತಹ ಕೃತ್ಯಗಳಿಂದ ಶಾಲೆಗೆ ಹೋಗುವ ಮಕ್ಕಳಿಗೆ ರಕ್ಷಣೆ ಇರಬೇಕು. ಯಾವುದೇ ರಾಜಿ ಇಲ್ಲದ ರೀತಿಯ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಈಗಾಗಲೇ ಇರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಕೋರಿ ವಕೀಲರಾದ ಅಭಾ ಆರ್‌. ಶರ್ಮಾ ಮತ್ತು ಸಂಗೀತಾ ಭಾರ್ತಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ನಿಯಮಗಳನ್ನು ಅನುಸರಿಸದ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು ಮತ್ತು ನೀಡಲಾದ ಅನುದಾನವನ್ನು ಹಿಂದಕ್ಕೆ ಪಡೆಯಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿದಾರರ ಬೇಡಿಕೆ

* ಪ್ರತಿ ಶಾಲೆಯೂ ಮಕ್ಕಳ ರಕ್ಷಣಾ ನೀತಿ ಹೊಂದಿರಬೇಕು. ಅದನ್ನು ಶಾಲೆಯ ಪ್ರತಿ ಸಿಬ್ಬಂದಿಗೂ ವಿವರಿಸಿ ಅರ್ಥ ಮಾಡಿಸಬೇಕು ಹಾಗೂ ಅವರ ಸಹಿ ಪಡೆಯಬೇಕು

* ಹೊಸದಾಗಿ ಕೆಲಸಕ್ಕೆ ಸೇರ್ಪಡೆ ಆದವರಿಗೆ ಒಂದು ತಿಂಗಳೊಳಗೆ ಮಕ್ಕಳ ಸುರಕ್ಷತೆ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಸಬೇಕು

* ಪ್ರತಿ ಶಾಲೆಯಲ್ಲಿಯೂ ಮಕ್ಕಳ ಸುರಕ್ಷತೆ ನಿಗಾ ಸಮಿತಿ ಇರಬೇಕು. ಅದರಲ್ಲಿ ಇಬ್ಬರು ವಿದ್ಯಾರ್ಥಿ ಪ್ರತಿನಿಧಿಗಳೂ ಇರಬೇಕು

* ಹೊಸ ನೇಮಕಾತಿ ಸಂದರ್ಭದಲ್ಲಿ ಪೊಲೀಸ್‌ ಪರಿಶೀಲನೆ ಕಡ್ಡಾಯಗೊಳಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.