ADVERTISEMENT

ಮೂರೇ ದಿನಗಳಲ್ಲಿ 2 ಕಿ.ಮೀ ರಸ್ತೆ ನಿರ್ಮಿಸಿದ ಬಿಹಾರ ಮಹಿಳೆಯರು

ಏಜೆನ್ಸೀಸ್
Published 19 ಜೂನ್ 2018, 16:08 IST
Last Updated 19 ಜೂನ್ 2018, 16:08 IST
   

ಬಂಕಾ(ಬಿಹಾರ):ಸರ್ಕಾರದ ನೆರವಿಲ್ಲದೆ, ಅಧಿಕಾರಿಗಳು ಮನಸು ಮಾಡದೆ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಲಾಗದು. ಆದರೆ, ಸ್ಥಳೀಯರೇ ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಕೇಳಬೇಕೆ? ಸ್ಥಳೀಯರ ಸಹಕಾರದ ಕೊರತೆಯಿಂದಾಗಿಸರ್ಕಾರವೇ ನೆರವೇರಿಸಲು ಸಾಧ್ಯವಾಗದಿದ್ದ ರಸ್ತೆ ನಿರ್ಮಾಣ ಕಾರ್ಯವನ್ನು ಇಲ್ಲಿನ ನಿಮಾ ಎಂಬ ಕುಗ್ರಾಮದಮಹಿಳೆಯರು ಮಾಡಿ ತೋರಿಸಿದ್ದಾರೆ.

ರಸ್ತೆ ನಿರ್ಮಾಣ ಕಾರ್ಯಕ್ಕೆ ಸ್ಥಳೀಯ ಭೂ ಮಾಲೀಕರು ಭೂಮಿ ನೀಡದ ಕಾರಣಇಲ್ಲಿನ ಅಧಿಕಾರಿಗಳು ರಸ್ತೆ ನಿರ್ಮಾಣ ಕಾರ್ಯವನ್ನು 4ವರ್ಷ ಹಿಂದೆಯೇ ನಿಲ್ಲಿಸಿದ್ದರು. ಆದರೆ, ಅವರ ಮನವೊಲಿಸಿರುವ ಹಳ್ಳಿಯ 130 ಮಹಿಳೆಯರು ಕೇವಲ 3 ದಿನಗಳಲ್ಲಿ 2 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಿದ್ದಾರೆ. ಆ ಮೂಲಕ ದೇಶದ ಗಮನವನ್ನೂ ಸೆಳೆದಿದ್ದಾರೆ. ಈ ಬಗ್ಗೆ ದಿ ಟೆಲಿಗ್ರಾಫ್‌ನಲ್ಲಿ ವರದಿ ಪ್ರಕಟವಾಗಿದೆ.

2 ಸಾವಿರಕ್ಕೂ ಹೆಚ್ಚು ಜನರಿರುವ ನಿಮಾ ಗ್ರಾಮದಲ್ಲಿ ದಶಕಕ್ಕೂ ಹಿಂದಿನಿಂದ ರಸ್ತೆ ಸಮಸ್ಯೆ ಇದೆ. ಇದರಿಂದಾಗಿ ಶಿಕ್ಷಣದಿಂದ ವಂಚಿತರಾದವರು, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಪ್ರಾಣ ಬಿಟ್ಟವರ ಸಂಖ್ಯೆಯೂ ದೊಡ್ಡದಿದೆ. ಹೀಗಿದ್ದರೂ ಸ್ಥಳೀಯರ ಮನವೊಲಿಸಿ ರಸ್ತೆ ನಿರ್ಮಿಸಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ.

ADVERTISEMENT

‘ಇಲ್ಲಿಂದ 2.5ಕಿ.ಮೀ ದೂರದ ವರೆಗೆ ಯಾವುದೇ ಆರೋಗ್ಯ ಕೇಂದ್ರಗಳಿಲ್ಲ. ಸರಿಯಾದ ರಸ್ತೆಯೂ ಇಲ್ಲದ ಕಾರಣ ಹಲವರು ಮೃತಪಟ್ಟಿದ್ದಾರೆ. ಆಸ್ಪತ್ರೆ ತಲುಪಲಾಗದೆ ಸಾವಿಗೀಡಾದವರಲ್ಲಿ ಹೆಚ್ಚಿನವರು ಗರ್ಭಿಣಿಯರು’ ಎಂದು ರೇಖಾ ದೇವಿ ಎನ್ನುವವರು ಬೇಸರ ವ್ಯಕ್ತಪಡಿಸಿದರು.

ರಸ್ತೆ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಝಲೋ ದೇವಿ ಎಂಬ ಮಹಿಳೆ, ‘ಮೂರು–ನಾಲ್ಕು ವರ್ಷಗಳ ಹಿಂದೆ ಇಲ್ಲಿ ರಸ್ತೆ ನಿರ್ಮಿಸುವ ಸಲುವಾಗಿ ಸ್ಥಳೀಯ ಆಡಳಿತವು ಭೂಮಿ ವಶಪಡಿಸಿಕೊಂಡಿತ್ತು. ಆದರೆ ಭೂ ಮಾಲೀಕರು ಪ್ರತಿಭಟನೆ ನಡೆಸಿದ್ದ ಕಾರಣ ಕೆಲಸ ಅಲ್ಲಿಗೇ ನಿಂತುಹೋಗಿತ್ತು’ ಎಂದು ಹೇಳಿದರು.

ಇತ್ತೀಚೆಗೆ ಸುರಿದ ಮಳೆಯ ಕಾರಣದಿಂದ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು. ಈ ವೇಳೆ ಹಳ್ಳಿಯ ಮಹಿಳೆಯರು ಭೂ ಮಾಲೀಕರ ಬಳಿ ಹೋಗಿ ರಸ್ತೆ ನಿರ್ಮಾಣಕ್ಕೆ ಭೂಮಿ ನೀಡುವಂತೆ ಮನವಿ ಮಾಡಿದ್ದರು. ಆರಂಭದಲ್ಲಿ ಒಪ್ಪದೇ ಇದ್ದ ಭೂ ಮಾಲೀಕರು, ಕೊನೆಗೆ ಸಮ್ಮತಿಸಿದ್ದರು.

‘ಇದೀಗ ನಿರ್ಮಾಣ ಮಾಡಲಾಗಿರುವ ರಸ್ತೆಯ ಶೇ. 70 ಭೂಮಿ ಸ್ಥಳೀಯ ಭೂ ಮಾಲೀಕರಿಗೆ ಸೇರಿದ್ದಾಗಿದೆ’ ಎಂದೂ ಹೇಳಿದರು.

‘ನಾವು ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದಾಗ ಜೊರಾರ್‌ಪುರ್‌ ಹಾಗೂ ದುರ್ಗಾಪುರ್‌ ಹಳ್ಳಿಗಳ ಕೆಲವು ಮಹಿಳೆಯರೂ ಸೇರಿಕೊಂಡರು. ಮುಂಜಾನೆಯೇ ಕೆಲಸ ಆರಂಭಿಸಿ ಸೂರ್ಯ ಮುಳುಗುವ ವರೆಗೂ ಮಾಡುತ್ತಿದ್ದೆವು. ಗಂಡಸರು ನೆಲ ಹಸನು ಮಾಡುತ್ತಿದ್ದರು. ನಾವು ಪಕ್ಕದ ನದಿ ತೀರದಿಂದ ಕಲ್ಲು, ಮಣ್ಣನ್ನು ತಂದು ಹಾಕುತ್ತಿದ್ದೆವು. ಇದೀಗ ಲಘು ವಾಹನಗಳು ಓಡಾಡುವಂತ ರಸ್ತೆ ನಿರ್ಮಾಣವಾಗಿದೆ’ ಎಂದು ಅನುಭವ ಹಂಚಿಕೊಂಡರು ಉಷಾದೇವಿ.

ಸದ್ಯ ನಿರ್ಮಿಸಲಾಗಿರುವ ರಸ್ತೆ ಪ್ರಸಿದ್ದ ಭೋಲೆ ಬಾಬಾ ಆಶ್ರಮದ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ.

ಮಹಿಳೆಯರ ಕಾರ್ಯವನ್ನು ಶ್ಲಾಘಿಸಿರುವ ಬಂಕಾ ಜಿಲ್ಲಾಧಿಕಾರಿ ಕುಂದನ್‌ ಕುಮಾರ್‌, ‘ಖಾಸಗಿ ಭೂಮಿ ಇಲ್ಲದೆ ರಸ್ತೆ ನಿರ್ಮಿಸಲಾಗದು. ಭೂ ಮಾಲೀಕರಿಂದ ಭೂಮಿ ಪಡೆಯಲು ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಮಹಿಳೆಯರು ರಸ್ತೆ ನಿರ್ಮಾಣ ಕಾರ್ಯ ಆರಂಭಿಸಿದ ಬಳಿಕ ಅದೇ ಮಾಲೀಕರು ಭೂಮಿ ಬಿಟ್ಟುಕೊಟ್ಟಿದ್ದಾರೆ. ಈ ರಸ್ತೆಯನ್ನು ಪರಿಪೂರ್ಣ ರಸ್ತೆಯನ್ನಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.