ADVERTISEMENT

ಮೂವರು ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಬಿಎಸ್‌ಎಫ್‌ ಯೋಧ

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:30 IST
Last Updated 6 ಮೇ 2018, 19:30 IST

ಕೈಲಾಶ್‌ಹಾರ್ (ತ್ರಿಪುರ): ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧ ಶಿಶುಪಾಲ್ ತಮ್ಮ ಬಂದೂಕಿನಿಂದ ಮೂವರು ಸಹೋದ್ಯೋಗಿಗಳಿಗೆ ಗುಂಡಿಕ್ಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಧಾನಿ ಅಗರ್ತಲದಿಂದ 185 ಕಿ.ಮೀ. ದೂರ ಇರುವ ಉನಾಕೋಟಿ ಜಿಲ್ಲೆಯ ಮುಗುರುಲಿಯ ಗಡಿ ಠಾಣೆಯಲ್ಲಿ ಭಾನುವಾರ ಬೆಳಗಿನ ಜಾವ ಇದು ನಡೆದಿದೆ. 

‘ಶಿಶುಪಾಲ್ ಕರ್ತವ್ಯದ ಅವಧಿ ಪೂರ್ಣಗೊಂಡ ಬಳಿಕ ರಾತ್ರಿ 1 ಗಂಟೆಗೆ ಬಂದೂಕನ್ನು  ಠಾಣೆಯಲ್ಲಿ ಇರಿಸಲು ಬಂದಿದ್ದರು. ಈ ವೇಳೆ ಹೆಡ್ ಕಾನ್‌ಸ್ಟೆಬಲ್ ಬಿಜೊಯ್ ಕುಮಾರ್ ಮೇಲೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟರು’ ಎಂದು ಇರಾನಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ  ಸ್ವಪನ್ ದೇವವರ್ಮ ತಿಳಿಸಿದ್ದಾರೆ.

ADVERTISEMENT

‘ದಾಳಿಗೂ ಮೊದಲು ವಾಗ್ವಾದ ನಡೆದಿತ್ತೇ ಎನ್ನುವ ಮಾಹಿತಿ ಇಲ್ಲ. ಕುಮಾರ್ ಹತ್ಯೆ ಬಳಿಕ ಪಾಲ್ ಆಕ್ರೋಶದಿಂದ ಯದ್ವಾತದ್ವಾ ಗುಂಡು ಹಾರಿಸಿದ್ದು ಇನ್ನಿಬ್ಬರು ಕಾನ್‌ಸ್ಟೆಬಲ್‌ಗಳಾದ ರಿಂಕು ಕುಮಾರ್ ಹಾಗೂ ರಾಕೇಶ್ ಕುಮಾರ್ ಜಾದವ್ ಗಾಯಗೊಂಡರು. ರಿಂಕು, ಉನಾಕೊಟಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟರು ಹಾಗೂ ಜಾದವ್ ಅಗರ್ತಲದ ಐಎಲ್‌ಎಸ್ ಆಸ್ಪತ್ರೆಯಲ್ಲಿ ಮೃತಪಟ್ಟರು’ ಎಂದು ಅವರು ಹೇಳಿದ್ದಾರೆ.

ಶಿಶುಪಾಲ್, ಬಿಜೊಯ್ ಕುಮಾರ್ ಹಾಗೂ ರಿಂಕು ಕುಮಾರ್ ಜಮ್ಮು ಮತ್ತು ಕಾಶ್ಮೀರದವರು. ಜಾದವ್ ಉತ್ತರ ಪ್ರದೇಶದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.