ADVERTISEMENT

ಮೆಟ್ರೊ, ಆ್ಯಪ್ ಆಧಾರಿತ ಕ್ಯಾಬ್‌ ಪರಿಣಾಮ: ಬೆಂಗಳೂರಿನಲ್ಲಿ ಕಾರು ಮಾರಾಟ ಇಳಿಕೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 4:47 IST
Last Updated 29 ಏಪ್ರಿಲ್ 2018, 4:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವೇಗವಾಗಿ ವಿಸ್ತರಣೆಯಾಗುತ್ತಿರುವ ಮೆಟ್ರೊ ಸಂಪರ್ಕ, ಆ್ಯಪ್ ಆಧಾರಿತ ಕ್ಯಾಬ್ ಸೇವೆ, ಹೆಚ್ಚುತ್ತಿರುವ ಆನ್‌ಲೈನ್‌ ಶಾಪಿಂಗ್ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಾರು ಮಾರಾಟ ಪ್ರಮಾಣ ಗಣನೀಯ ಇಳಿಕೆಯಾಗಿದೆ.

ಈ ಕುರಿತು ಕೈಗಾರಿಕಾ ಮೂಲಗಳಿಂದ ಸಂಗ್ರಹಿಸಿದ ಅಂಕಿಅಂಶಗಳ ಆಧಾರದಲ್ಲಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಭಾರತದ ಎರಡನೇ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿರುವ ಬೆಂಗಳೂರಿನಲ್ಲಿ 2017–18ನೇ ಸಾಲಿನಲ್ಲಿ ಕಾರು ಮಾರಾಟದ ಪ್ರಮಾಣ ಶೇಕಡ 11ರಷ್ಟು ಇಳಿಕೆಯಾಗಿದೆ.

ADVERTISEMENT

ಮುಂಬೈನಲ್ಲಿ 2017–18ನೇ ಸಾಲಿನಲ್ಲಿ ಕಾರು ಮಾರಾಟದ ಪ್ರಮಾಣ ಶೇಕಡ 20ರಷ್ಟು ಇಳಿಕೆಯಾಗಿದೆ. ಚೆನ್ನೈನಲ್ಲಿ ಕಾರು ಮಾರಾಟದ ಪ್ರಮಾಣ ಶೇಕಡ 4.5ರಷ್ಟು ಇಳಿಕೆಯಾಗಿದೆ.

ಈ ಅವಧಿಯಲ್ಲಿ ಅಲ್ಲಿ 1.22 ಲಕ್ಷ ಕಾರುಗಳು ಮಾರಾಟವಾಗಿವೆ. ದೇಶದ ಅತಿ ದೊಡ್ಡ ಕಾರು ಮಾರುಕಟ್ಟೆಯಾಗಿರುವ ದೆಹಲಿಯಲ್ಲಿ ಮಾತ್ರ ಕಾರು ಮಾರಾಟದ ಪ್ರಮಾಣ ಶೇಕಡ 1.6ರಷ್ಟು ಹೆಚ್ಚಾಗಿದೆ. ಆದರೆ, ಈ ಹಿಂದಿನ ವರ್ಷಗಳ ಮಾರಾಟದ ಪ್ರಮಾಣಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ. ಡೀಸೆಲ್ ಕಾರಿನ ನಿಷೇಧವೂ ಇದಕ್ಕೆ ಕಾರಣ ಎನ್ನಲಾಗಿದೆ.

ಆದರೆ, ಒಟ್ಟಾರೆಯಾಗಿ ಭಾರತದಾದ್ಯಂತ ಕಾರು ಮಾರಾಟದ ಪ್ರಮಾಣ ಶೇಕಡ 10ರಷ್ಟು ಹೆಚ್ಚಳವಾಗಿದೆ. ಓಲಾ, ಉಬರ್‌ನಂಥ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳಿಂದಾಗಿ ಮೆಟ್ರೊ ನಗರಗಳಲ್ಲಿ ಕಾರು ಮಾರಾಟ ಹೆಚ್ಚಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಹುಂಡೈ ಕಂಪೆನಿಯ ಭಾರತ ಘಟಕದ ಮಾರುಕಟ್ಟೆ ವಿಭಾಗದ ನಿರ್ದೇಶಕ ರಾಕೇಶ್‌ ಶ್ರೀವಾಸ್ತವ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.