ADVERTISEMENT

ಮೇವು ಹಗರಣ: 30ರಂದು ತೀರ್ಪು

ಲಾಲು ಸೇರಿ 45 ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST

ರಾಂಚಿ (ಪಿಟಿಐ): ಮೇವು ಹಗರಣದ ವಿಚಾರಣೆ ಮುಗಿಸಿದ ಸಿಬಿಐ ವಿಶೇಷ ನ್ಯಾಯಲಯವು ಬಿಹಾರ ಮಾಜಿ ಮುಖ್ಯ­ಮಂತ್ರಿ ಲಾಲು ಪ್ರಸಾದ್‌ ಸೇರಿದಂತೆ 45 ಆರೋಪಿಗಳ ಕುರಿತು ಸೆ.30ರಂದು ತೀರ್ಪು ಪ್ರಕಟಿಸಲಿದೆ.

ಆರ್‌ಜೆಡಿ ಮುಖ್ಯಸ್ಥರೂ ಆದ ಲಾಲು ಪ್ರಸಾದ್‌ ವಾದವನ್ನು ಮಂಗಳ­ವಾರ ಆಲಿಸಿದ ನ್ಯಾಯಾಧೀಶ ಪ್ರವಾಸ್‌ ಕುಮಾರ್‌, ತೀರ್ಪು ಪ್ರಕಟಣೆ­ಯನ್ನು ಸೆ.30ಕ್ಕೆ ಕಾಯ್ದಿರಿಸಿದರು.

1990ರ ದಶಕದ ಆರಂಭದಲ್ಲಿ ಚೈಬಾಸಾ ಖಜಾನೆಯಿಂದ 37.7 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ನಗದು ಮಾಡಿಸಿಕೊಂಡ ಈ ಪ್ರಕರಣದಲ್ಲಿ, ಲಾಲು ಪ್ರಸಾದ್‌ ಪರವಾಗಿ ವಕೀಲ ಸುರೇಂದ್ರ ಸಿಂಗ್‌ ವಾದ ಮಂಡಿಸಿದರು.

ತಮ್ಮ ಕಕ್ಷಿದಾರನನ್ನು ವಿಚಾರಣೆಗೆ ಒಳಪಡಿಸಿರುವ ಪ್ರಕ್ರಿಯೆಯೇ ನಿಯಮಬಾಹಿರವಾಗಿದೆ. ಏಕೆಂದರೆ, ಆಗಿನ ರಾಜ್ಯಪಾಲರು ಸಚಿವ ಸಂಪುಟದ ಒಪ್ಪಿಗೆ ಪಡೆಯದೆ ಆರ್‌ಜೆಡಿ ಮುಖ್ಯಸ್ಥರ ವಿಚಾರಣೆಗೆ ಅನುಮತಿ ನೀಡಿದ್ದರು ಎಂದು ಸುರೇಂದ್ರ ಸಿಂಗ್‌ ವಾದಿಸಿದರು.

ಮೇವು ಹಗರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದೇ ಲಾಲು ಅವರು. ಈ ಸಂಬಂಧ ಅವರು ನೀಡಿದ್ದ ನಿರ್ದೇಶನದ ಮೇರೆಗೆ 41 ಎಫ್‌ಐಆರ್‌ಗಳು ದಾಖಲಾಗಿವೆ ಎಂದೂ ಸಿಂಗ್‌ ತರ್ಕಿಸಿದರು.

ಆದರೆ ಸಿಬಿಐ ಈ ವಾದವನ್ನು ಆಕ್ಷೇಪಿಸಿತು. ರಾಜ್ಯಪಾಲರಾದವರು ವಿಚಾರಣೆಗೆ ಅನುಮತಿ ನೀಡಲು ಸಚಿವ ಸಂಪುಟದ ಒಪ್ಪಿಗೆಯನ್ನೇನೂ ಪಡೆಯಬೇಕಿಲ್ಲ ಎಂದು ವಾದ ಮಂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.