ADVERTISEMENT

ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಸೋನಿಯಾ ಗಾಂಧಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 9:45 IST
Last Updated 2 ಅಕ್ಟೋಬರ್ 2011, 9:45 IST

ನವದೆಹಲಿ (ಪಿಟಿಐ): ಅನಾರೋಗ್ಯ ಹಾಗೂ ಶಸ್ತ್ರಚಿಕಿತ್ಸೆ ಕಾರಣ ಕಳೆದೊಂದು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗಾಂಧಿ ಜಯಂತಿಯ ದಿನವಾದ ಭಾನುವಾರ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧೀಜಿ ಸಮಾಧಿ ಬಳಿ ನಡೆದ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೋಳ್ಳುವ ಮೂಲಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು.

ಸೋನಿಯಾ ಅವರು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ ಅವರ ಜತೆಗೆ 15ರಿಂದ 20 ನಿಮಿಷಗಳ ಕಾಲ ಪ್ರಾರ್ಥನಾ ಸಭೆಯಲ್ಲಿ ಹಾಜರಿದ್ದರು.

ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಕೇಂದ್ರ ನಗರಾಭಿವೃದ್ದಿ ಸಚಿವ ಕಮಲನಾಥ್ ಸೇರಿದಂತೆ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿದ್ದರು. ಸಭೆಯ ನಂತರ ಸೋನಿಯಾ ಅವರನ್ನು ಭೇಟಿ ಮಾಡಿದ ಅಡ್ವಾಣಿ ಅವರು ಕುಶಲೋಪರಿ ವಿಚಾರಿಸಿದರು.
 
ಅರವತ್ತನಾಲ್ಕು ವರ್ಷದ ಸೋನಿಯಾ ಅವರು ಅನಾರೋಗ್ಯ ನಿಮಿತ್ತ ಕಳೆದ ಅಗಸ್ಟ್‌ನಲ್ಲಿ ಅಮೆರಿಕಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ವಾಪಸಾಗಿದ್ದರು. ಆದರೆ ಇವರೆಗೂ ಅವರು ತಮ್ಮ ಕಾಯಿಲೆ ಕುರಿತು ಬಹಿರಂಗಪಡಿಸಿಲ್ಲ.
 
ಅಮೆರಿಕದಿಂದ ಹಿಂದಿರುಗಿದ ನಂತರ ಕಾಂಗ್ರೆಸ್ ಮುಖಂಡರೊಂದಿಗೆ ಕೆಲ ಸಭೆಗೆ ಹಾಜರಾಗಿದ್ದ ಸೋನಿಯಾ ಅವರು ಈವರೆಗೆ ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.