ADVERTISEMENT

ಮೋಡಿ ಮಾಡದ ‘ನಮೋ’

ಚುನಾವಣೆ ನಾಡಿನಿಂದ

ಹೊನಕೆರೆ ನಂಜುಂಡೇಗೌಡ
Published 12 ನವೆಂಬರ್ 2013, 19:30 IST
Last Updated 12 ನವೆಂಬರ್ 2013, 19:30 IST

ಜಗದಲ್‌ಪುರ (ಛತ್ತೀಸಗಡ): ಛತ್ತೀಸ ಗಡದಲ್ಲಿ ‘ಮೋದಿ ಅಲೆ’ ಇದ್ದಂತೆ ಕಾಣುವುದಿಲ್ಲ. ಬಿಜೆಪಿ ಪ್ರಧಾನಿ ಅಭ್ಯ ರ್ಥಿಗೆ ಆದಿವಾಸಿಗಳ ರಾಜ್ಯ ದಲ್ಲಿ ರತ್ನ­ಗಂಬಳಿ ಸ್ವಾಗತವೇನೂ ಸಿಕ್ಕಿಲ್ಲ. ಪಕ್ಷದ ಉಳಿದೆಲ್ಲ ನಾಯಕ­ರಂತೆ ಅವರೂ ಹತ್ತರೊಳಗೆ ಹನ್ನೊಂದನೆಯ­ವರಾಗಿ ಬಂದುಪ್ರಚಾರ ಮಾಡಿ ಹೋಗಿದ್ದಾರೆ.

ಗುಜರಾತಿನ ‘ವಿಕಾಸ ಪುರುಷ’ ನರೇಂದ್ರ ಮೋದಿ ಮೂರು ಸುತ್ತು ಪ್ರವಾಸ  ಮಾಡಿದ್ದಾರೆ. ಕಾಂಕೇರ್‌, ಜಗದಲ್‌ಪುರ ಹಾಗೂ ಡೊಂಗರಗಡ ಗಳಲ್ಲಿ ಭಾಷಣ ಮಾಡಿದ್ದಾರೆ. ಮೂರು ಸಭೆಗಳಿಗೂ ಬಿಜೆಪಿ ನಿರೀಕ್ಷಿಸಿ ದಷ್ಟು ಜನರು ಬಂದಿರಲಿಲ್ಲ.

ಮೋದಿ ಉತ್ತರದ ರಾಜ್ಯಗಳಿಗೆ ಹೋದರೆ ‘ಹುಯ್‌’ ಎಂದು ಜನ ಸೇರುತ್ತಾರೆ. ಸಾರ್ವಜನಿಕ ಸಭೆಗಳಲ್ಲಿ ಮೋದಿ ಎತ್ತುವ ಪ್ರಶ್ನೆಗಳಿಗೆ ಪ್ರತಿಕ್ರಿ ಯಿಸುತ್ತಾರೆ. ಅವರು ಕೂಗುವ ಘೋಷಣೆಗಳಿಗೆ ದನಿಗೂಡಿಸುತ್ತಾರೆ. ಛತ್ತೀಸ್‌ಗಡದಲ್ಲಿ ಹಾಗಾಗಲಿಲ್ಲ. ತಮ್ಮ ಎದುರಾಳಿ ಕಾಂಗ್ರೆಸ್‌ ಪಕ್ಷವನ್ನು ಟೀಕಿ ಸುವ ನಾಯಕ ನಿಗೆ ಸಾರ್ವಜನಿಕರಿಂದ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ.

ಛತ್ತೀಸಗಡ ಬಿಜೆಪಿ ಕೂಡಾ ನರೇಂದ್ರ ಮೋದಿ ಅವರಿಗೆ ರತ್ನಗಂಬಳಿ ಸ್ವಾಗತ ವೇನೂ ನೀಡಿಲ್ಲ. ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್‌ ಮತ್ತು ಅರುಣ್‌ ಜೇಟ್ಲಿ ಅವರಂತೆ ಅವರೂ ಹತ್ತರೊಳಗೆ ಹನ್ನೊಂದನೇ ನಾಯಕರಾಗಿ ಬಂದು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರನ್ನು ವಿಚಾರಿಸಿದರೆ ತುಟಿ ಬಿಚ್ಚುವುದಿಲ್ಲ.

ಬಹುತೇಕ ಬಿಜೆಪಿ ಪೋಸ್ಟರ್‌ಗಳಲ್ಲಿ ಮೋದಿ ಭಾವ ಚಿತ್ರವಿಲ್ಲ. ಮುಖ್ಯಮಂತ್ರಿ ರಮಣ್‌ಸಿಂಗ್‌ ಕಮಲದ ಜತೆಗಿರುವ ಪೋಸ್ಟರ್‌ಗಳೇ ಅತ್ಯಧಿಕವಾಗಿ ಕಾಣು ತ್ತವೆ. ರಾಜಧಾನಿ ರಾಯಪುರದಲ್ಲಿ ಮಾತ್ರ ರಮಣ್‌ಸಿಂಗ್‌ ಪಕ್ಕದಲ್ಲಿ ಮೋದಿ ಮತ್ತಿತರರ ಭಾವಚಿತ್ರವಿರುವ ಕೆಲವೇ ಪೋಸ್ಟರ್‌ಗಳನ್ನು ಹಾಕಲಾಗಿದೆ.

ಮೂರ್ನಾಲ್ಕು ತಿಂಗಳ ಹಿಂದೆ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ‘ಯಾತ್ರೆ’ ಕೈಗೊಂಡಿದ್ದಾಗ ಪೋಸ್ಟರ್‌ಗಳಲ್ಲಿ ಮೋದಿ ಭಾವಚಿತ್ರ ಇಲ್ಲವೆಂದು ವಿವಾದವಾಗಿತ್ತು. ಅನಂತರ ಪೋಸ್ಟರ್‌ಗಳನ್ನು ಬದಲಾಯಿಸಲಾ ಯಿತು. ಛತ್ತೀಸ್‌ಗಡ ಆದಿವಾಸಿಗಳು ಮತ್ತು ಹಿಂದುಳಿದ ವರು ಹೆಚ್ಚಿರುವ ರಾಜ್ಯ. ನಗರಗಳ ಜನರನ್ನು ಬಿಟ್ಟರೆ ಮಿಕ್ಕವರಿಗೆ ಮೋದಿ ಅವರ ಪರಿಚಯ ಹೆಚ್ಚಾಗಿ ಇದ್ದಂತಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಭೆಗಳಿಗೆ ಹೆಚ್ಚು ಜನ ಸೇರು ತ್ತಿಲ್ಲ. ಚುನಾವಣೆ ಪ್ರಚಾರಕ್ಕೆ ಹೊರಗಿನ ನಾಯಕರ ಅಗತ್ಯವಿಲ್ಲ. ರಮಣ್‌ಸಿಂಗ್‌ ಅವರೇ ಸಾಕು. ಅವರ ಮೇಲೆ ಅಭಿ ಮಾನವಿದೆ ಎನ್ನುವುದು ಸ್ಥಳೀಯರ ಪ್ರತಿಪಾದನೆ.

ಛತ್ತಿಸಗಡದ ಜನರಿಗೆ ಬಿಜೆಪಿ ನಾಯ ಕರಲ್ಲಿ ವಾಜಪೇಯಿ ಮಾತ್ರ ಪರಿಚಯ ವಿದೆ. ಅವರ ಅಧಿಕಾರದ ಅವಧಿಯಲ್ಲೇ ಹೊಸ ರಾಜ್ಯ ಉದಯವಾಗಿದ್ದು. ಹೀಗಾಗಿ ಜನ ಇನ್ನು ಅವರನ್ನು ಮರೆತಿಲ್ಲವಂತೆ.

ಕಾಂಗ್ರೆಸ್‌ ಪಕ್ಷದಲ್ಲಿ ಸೋನಿಯಾ ಹಾಗೂ ರಾಹುಲ್‌ ಬಿಟ್ಟರೆ ಮೂರನೆ ಯವರು ಗೊತ್ತಿಲ್ಲ. ಸ್ಥಳೀಯ ಕಾಂಗ್ರೆಸ್‌ ನಾಯಕರ ಪರಿಚಯ ಚೆನ್ನಾಗಿದೆ. ಕಳೆದ ವಾರ ಪ್ರಧಾನಿ ಮನಮೋಹನ್‌ ಸಿಂಗ್‌ ರಾಯಪುರಕ್ಕೆ ಬಂದಿದ್ದರು. ಒಳಾಂಗಣ ಕ್ರೀಡಾಂಗಣ ದಲ್ಲಿ ಕಾರ್ಯ ಕರ್ತರ ಸಭೆ ಉದ್ದೇಶಿಸಿ ವಾಪಸ್ಸಾದರು.

ಛತ್ತೀಸಗಡ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರಿ ಗಿದು ಮೂರನೇ ವಿಧಾನ ಸಭೆ ಚುನಾವಣೆ. ನೆರೆಯ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೂ ಮೂರನೇ ಪರೀಕ್ಷೆ. ಮೋದಿ ಹೋದ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ಯಲ್ಲಿ ’ಹ್ಯಾಟ್ರಿಕ್‌’ ಬಾರಿಸಿದ್ದಾರೆ. ಈ ಮೂವರೂ ಹೆಚ್ಚುಕಡಿಮೆ ಒಂದೇ ವಾರಿಗೆಯವರು.

ರಮಣ್‌ಸಿಂಗ್‌, ಶಿವರಾಜ್‌  ಗೆದ್ದರೆ ಮೋದಿಗಿಂತ ಕಡಿಮೆ ಇಲ್ಲ ಎನ್ನುವಂಥ ವಾತಾವರಣ ಬಿಜೆಪಿಯಲ್ಲಿ ಸೃಷ್ಟಿ ಯಾಗಲಿದೆ. ಮೋದಿ ಅವರ ಮೇಲೆ ಹೆಚ್ಚು ಅವಲಂಬಿಸಿದರೆ ಗೆಲುವಿನ ಶ್ರೇಯಸ್ಸು ಅವರಿಗೆ ಹೋಗ ಬಹುದು ಎಂಬ ಸಣ್ಣ ಅಳುಕಿನಿಂದ ಹೆಚ್ಚು ಮಹತ್ವ ನೀಡಿಲ್ಲ ಎಂಬ ಮಾತು ಛತ್ತೀಸಗಡ ಬಿಜೆಪಿಯಲ್ಲಿ ಕೇಳಿಬರುತ್ತಿದೆ.

ಹದಿಮೂರು ವರ್ಷದ ಹಿಂದೆ ಹೊಸ ದಾಗಿ ಛತ್ತೀಸಗಡ ರಾಜ್ಯ ಉದಯ ವಾದಾಗ 3 ವರ್ಷ ಕಾಂಗ್ರೆಸ್‌ ಸರ್ಕಾರ ವಿತ್ತು. 2003ರ ವಿಧಾನಸಭೆ ಚುನಾ ವಣೆಯಲ್ಲಿ  ರಮಣ್‌ಸಿಂಗ್‌ ಅವರಿಗೆ ಹೊಣೆಗಾರಿಕೆ ವಹಿಸಲಾಯಿತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮುಖ್ಯ ಮಂತ್ರಿ ಯಾದರು. ಮಾರನೆ ವರ್ಷ ಡೊಂಗರ ಗಾಂವ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆಗೊಂಡರು.

ಐದು ವರ್ಷದ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲೂ ರಮಣ್‌ ಸಿಂಗ್‌ ಪಕ್ಷವನ್ನು ಅಧಿಕಾರಕ್ಕೆ ತಂದರು. ರಾಜ್ಯಕ್ಕೆ ಅವರೇ ‘ರಾಜಕೀಯ ಐಕಾನ್‌’ ಹೊರಗಿನ ನಾಯಕರ ಮೇಲೆ ನಾವು ಅವಲಂಬನೆ ಆಗುವ ಅಗತ್ಯವಿಲ್ಲ ಎನ್ನುವ ಅಭಿಪ್ರಾಯ ಸಾಮಾನ್ಯ ವಾಗಿ ಕೇಳಿಬರುತ್ತದೆ.

ಛತ್ತೀಸಗಡವು ಗುಜರಾತ್‌, ಉತ್ತರ ಪ್ರದೇಶ ಅಥವಾ ಇನ್ನಿತರ ರಾಜ್ಯ ದಂತಲ್ಲ. ಇಲ್ಲಿ ಮತೀಯ ವಾದ, ಜಾತಿ ವಾದಕ್ಕೆ ಜಾಗವಿಲ್ಲ. ಜನ ಜಾತ್ಯತೀತ ನಿಲುವಿನವರು. 80ರ ದಶಕದ ಬಳಿಕ ನಮ್ಮ ರಾಜ್ಯ ದಲ್ಲಿ ಮತೀಯ ಗಲಭೆಯೇ ಆಗಿಲ್ಲ, ಹೀಗಾಗಿ ಮೋದಿ ಅವರಂಥ ನಾಯಕರಿಗೆ ಮಹತ್ವವಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕ ದೀಪಕ್‌ ಪಾಚ್‌ಪೋರ್‌.

ರಮಣ್‌ಸಿಂಗ್‌ ಈ ಚುನಾವಣೆ ಸೇರಿದಂತೆ ಯಾವುದೇ ಸಮಯದಲ್ಲಿ ಹಿಂದು– ಹಿಂದುತ್ವವಾದ ಕುರಿತು ಬಹಿರಂಗವಾಗಿ ಮಾತನಾಡಿಲ್ಲ. ಛತ್ತೀಸ ಗಡ ಮೂಲತಃ ಆದಿವಾಸಿಗಳು, ಹಿಂದು ಳಿದವರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯ. ಇವುಗಳ ಬಗ್ಗೆ ಎಂದೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ದಾಂತೆ ವಾಡದ ಮೊಹಿದ್ದೀನ್‌.

ರಮಣ್‌ಸಿಂಗ್ ಗುಂಪುಗಾರಿಕೆ ಮಾಡುವ ನಾಯಕ ರಲ್ಲ. ಅಡ್ವಾಣಿ ಸೇರಿದಂತೆ ಎಲ್ಲ ಬಿಜೆಪಿ ನಾಯಕರನ್ನು ಅವರು ಸಮಾನವಾಗಿ ಕಾಣುತ್ತಾರೆ. ಒಬ್ಬರಿಗೆ ಮಣೆ ಹಾಕಿ, ಮತ್ತೊಬ್ಬರನ್ನು ಕಡೆಗಣಿಸುವುದು ಮುಖ್ಯ ಮಂತ್ರಿ ಜಾಯಮಾನವಲ್ಲ ಎನ್ನುವ ಮಾತು ಗಳು ಕೇಳಿಬರುತ್ತವೆ.

ಮೋದಿ ಮತ್ತು ರಮಣ್‌ಸಿಂಗ್‌ ಅವರ ನಡುವೆ ವ್ಯತ್ಯಾಸವಿಲ್ಲ. ಮೋದಿ ನೇರವಾಗಿ ತಮ್ಮ ಅಜೆಂಡಾ ಪ್ರತಿಪಾದಿ ಸುತ್ತಾರೆ. ರಮಣ್‌ಸಿಂಗ್‌ ಒಳಗೊಳಗೆ ಈ ಕೆಲಸ ಮಾಡುತ್ತಿದ್ದಾರೆ. ಅವರೇನು ಮಾಡುತ್ತಿದ್ದಾ ರೆಂದು ಯಾರಿಗೂ ಗೊತ್ತಾಗುವುದಿಲ್ಲ ಎಂದು ವಿಲಾಸ ಪುರದ ಆನಂದ ಮಿಶ್ರ ಅವರು ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.