ADVERTISEMENT

ಮೋದಿ ಪ್ರಧಾನಿಯಾದರೆ ಆಪತ್ತು

ಮುಂದಿನ ಬಾರಿ ಪ್ರಧಾನಿ ಅಭ್ಯರ್ಥಿ ನಾನಲ್ಲ * ಉನ್ನತ ಹುದ್ದೆಗೇರಲು ರಾಹುಲ್‌ಗೆ ಅರ್ಹತೆಯಿದೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ನವದೆಹಲಿ: ‘ಮೂರನೇ ಸಲ ನಾನು ಪ್ರಧಾನಿ ಆಗಬಯಸುವುದಿಲ್ಲ. ಲೋಕಸಭೆ ಚುನಾವಣೆಯ ಬಳಿಕ ಹೊಸಬರಿಗೆ ಅಧಿಕಾರ ಹಸ್ತಾಂತರಿಸುವೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಉನ್ನತ ಹುದ್ದೆಗೇರಲು ಎಲ್ಲ ರೀತಿಯಲ್ಲೂ ಯೋಗ್ಯರು. ನರೇಂದ್ರ ಮೋದಿ ಪ್ರಧಾನಿಯಾದರೆ ದೇಶಕ್ಕೆ ಆಪತ್ತು’ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದರು.

ಒಂದು ವಾರದಿಂದ ತೀವ್ರ ಕುತೂಹಲ ಕೆರಳಿ­ಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಪ್ರಧಾನಿ ಸಿಂಗ್‌ ಮಾತನಾಡಿದರು. ‘ಮೋದಿ ಪ್ರಧಾನಿ­ಯಾದರೆ ದೇಶಕ್ಕೆ ನಿಜಕ್ಕೂ ಆಪತ್ತು. ಅವರು ಉನ್ನತ ಹುದ್ದೆ ಅಲಂಕರಿಸಬಾರದು ಎನ್ನುವುದು ನನ್ನ ಪ್ರಾಮಾಣಿಕ ಕಳಕಳಿ’ ಎಂದರು.

‘ಚುನಾವಣೆ ಬಳಿಕ ಯುಪಿಎ ಮೈತ್ರಿಕೂಟದ ನಾಯಕರೇ ಪ್ರಧಾನಿ ಆಗುವರೆಂಬ ವಿಶ್ವಾಸವಿದೆ. ನಾನು ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಇರುವುದಿಲ್ಲ. ಹೊಸ ನಾಯಕನಿಗೆ ಅಧಿಕಾರ ವಹಿಸಿಕೊಟ್ಟು ಹೊರಗಿರುವೆ’ ಎಂದು ಸ್ಪಷ್ಟಪಡಿಸಿದರು.ಸಕ್ರಿಯವಾದ ರಾಜಕಾರಣದಿಂದ ನಿವೃತ್ತಿ ಪಡೆದ ನಂತರದ ಯೋಜನೆ ಕುರಿತು ಆಲೋಚಿಸಿಲ್ಲ ಎಂದು ನುಡಿದರು.

ರಾಹುಲ್‌ ಹಾದಿ ಸುಗಮ: ಮನಮೋಹನ್‌ ಸಿಂಗ್‌ ಹೇಳಿಕೆ­ಯಿಂದಾಗಿ ರಾಹುಲ್‌ ಹಾದಿ ಸುಗಮ­ವಾಗಿದೆ. ಕಾಂಗ್ರೆಸ್‌ ಉಪಾಧ್ಯಕ್ಷ­ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬಹುದು ಎಂದು ಕಳೆದ ಕೆಲ ದಿನಗಳಿಂದ ಕಾಂಗ್ರೆಸ್‌ ಪಕ್ಷದೊಳಗೆ ಕೇಳಿಬರುತ್ತಿರುವ ಅಭಿಪ್ರಾಯಗಳಿಗೆ ಬಲ ಬಂದಿದೆ.
ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರೆಂದು ಸೂಕ್ತ ವೇಳೆಯಲ್ಲಿ ನಿರ್ಧರಿಸಲಾಗುವುದು. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಈಗಾಗಲೇ ಈ ಮಾತು ಹೇಳಿದ್ದಾರೆಂದು ಮನಮೋಹನ್‌ಸಿಂಗ್‌ ಸ್ಪಷ್ಟಪಡಿಸಿದರು. ರಾಹುಲ್‌ಗೆ ಎಲ್ಲ ದೃಷ್ಟಿಯಿಂದ ಪ್ರಧಾನಿ ಆಗುವ ಅರ್ಹತೆ ಇದೆ ಎಂದು ಪ್ರಧಾನಿ ಪ್ರತಿಪಾದಿಸಿದರು.

ಅನೇಕ ಸಲ ಸಂಪುಟ ಸೇರುವಂತೆ ರಾಹುಲ್‌ ಅವರಿಗೆ ಆಹ್ವಾನ ನೀಡಿದ್ದೆ. ಅವರು ಸರ್ಕಾರ­ದೊಳಗೆ ಸೇರಿದ್ದರೆ ತಮಗೆ ಇನ್ನಷ್ಟು ಬಲ ಬರು­ತಿತ್ತು. ಆದರೆ, ಪಕ್ಷದೊಳಗೆ ಹೆಚ್ಚು ಜವಾಬ್ದಾರಿ­ಗಳಿವೆ ಎಂದು ಹೇಳಿ ಆಹ್ವಾನ ನಿರಾಕರಿಸಿದ್ದರು ಎಂದು ಪ್ರಧಾನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೋದಿ ಗಂಡಾಂತರ: ಲೋಕಸಭೆ ಚುನಾವಣೆ­ಯಲ್ಲಿ ಮೋದಿ–ರಾಹುಲ್‌ ನಡುವಣ ಹೋರಾಟ ಕುರಿತು ಕೇಳಿದ ಪ್ರಶ್ನೆಗೆ, ಗುಜರಾತ್‌ ಮುಖ್ಯಮಂತ್ರಿ ಪ್ರಧಾನಿ­ಯಾದರೆ ದೇಶಕ್ಕೆ ಗಂಡಾಂತರ ಎಂದು ಪ್ರಧಾನಿ ಎಚ್ಚರಿಸಿದರು. ಮೋದಿ ಅವರನ್ನು ಕುರಿತು ಪ್ರಧಾನಿ ವ್ಯಕ್ತಪಡಿಸಿದ ಅತ್ಯಂತ ತೀಕ್ಷ್ಣವಾದ ಪ್ರತಿಕ್ರಿಯೆ ಇದಾಗಿದೆ.

ಒಂಬತ್ತೂವರೆ ವರ್ಷದ ಅಧಿಕಾರಾವಧಿಯಲ್ಲಿ ಪ್ರಧಾನಿ ಸಿಂಗ್‌ ನಡೆಸಿದ ಮೂರನೇ ಪತ್ರಿಕಾ­ಗೋಷ್ಠಿ ಇದು. ‘ಯುಪಿಎ– 2’ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2010ರ ಮೇ 24 ರಂದು ಎರಡನೆ ಪತ್ರಿಕಾಗೋಷ್ಠಿ ರಾಜಧಾನಿಯಲ್ಲಿ ನಡೆದಿತ್ತು.

ಸರ್ಕಾರದ ಬೆಂಬಲಕ್ಕೆ ನಿಂತ ಸೋನಿಯಾ: ‘ಕಾಂಗ್ರೆಸ್‌ ಪಕ್ಷದಲ್ಲಿ ಎರಡು ಅಧಿಕಾರ ಕೇಂದ್ರ-ಗಳು ಇರುವುದರಿಂದ ತಮ್ಮ ಕೆಲಸಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ಆಗಿಲ್ಲ. ಪ್ರಧಾನಿ ಮತ್ತು ಅಧ್ಯಕ್ಷರು ಬೇರೆ ಬೇರೆ ಆಗಿರುವುದು ಒಳ್ಳೆಯ­ದಾಗಿದೆ. ಹತ್ತು ವರ್ಷ ಈ ವ್ಯವಸ್ಥೆ ಚೆನ್ನಾಗಿ ನಡೆದಿದೆ. ಅನೇಕ ಸಂಕಷ್ಟದ ಪರಿಸ್ಥಿತಿಗಳಲ್ಲಿ ಸೋನಿಯಾ ಗಾಂಧಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಯಾವ ಸಂದರ್ಭದಲ್ಲೂ ನಮ್ಮ ಸಂಬಂಧ ಹದಗೆಟ್ಟಿಲ್ಲ’ ಎಂದು ಮನಮೋಹನ್‌ಸಿಂಗ್‌ ವಿವರಿಸಿದರು.

ಸೋನಿಯಾ ಅಥವಾ ರಾಹುಲ್‌ ಅವರ ನಿಲುವು ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರದ ತೀರ್ಮಾನದಲ್ಲಿ ಪ್ರತಿಫಲಿತ­ವಾಗಿದೆ. ಅದರಿಂದ ಕೆಟ್ಟದೇನೂ ಆಗಿಲ್ಲ.  ಇದರಿಂದ ಅನೇಕ ಸಮಸ್ಯೆ­ಗಳನ್ನು ಪರಿಹರಿಸಲು ಸಾಧ್ಯವಾಗಿದೆ ಎಂದರು.ಕೆಲವು ಸಂದರ್ಭದಲ್ಲಿ ಪಕ್ಷ ಮತ್ತು ಸರ್ಕಾರದ ನಡುವೆ ಅಭಿಪ್ರಾಯ ವ್ಯತ್ಯಾಸಗಳು ಆದಾಗ ಸರ್ಕಾರ ತೀರ್ಮಾನ ಬದಲಾಯಿಸಿದ ಉದಾಹರ­ಣೆ­­ಗಳಿವೆ ಎಂದು ಸಿಂಗ್‌ ಒಪ್ಪಿಕೊಂಡರು.

ಯುಪಿಎ– 1 ಅಧಿಕಾರಕ್ಕೆ ಬಂದಾಗ ಅನೇಕರು ಮೈತ್ರಿಕೂಟದ ಸರ್ಕಾರ ಬಹಳ ದಿನ ಮುಂದುವರಿ­ಯುವ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ತಮ್ಮ ನೇತೃತ್ವದ ಸರ್ಕಾರ ಯಶಸ್ವಿ­ಯಾಗಿ ಎರಡು ಅವಧಿ ಪೂರ್ಣಗೊಳಿಸಿ ಎಲ್ಲರ ಅನುಮಾನಗಳನ್ನು ನಿವಾರಿಸಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT