ADVERTISEMENT

ಮೋದಿ ಪ್ರಧಾನಿ: ಅಳಗಿರಿ ಒಲವು

ಹೊಸ ಪಕ್ಷ ಸ್ಥಾಪನೆ ಇಲ್ಲ –ಕರುಣಾನಿಧಿ ಪುತ್ರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಮದುರೆ (ಪಿಟಿಐ): ಬಿಜೆಪಿಯ ನರೇಂದ್ರ ಮೋದಿ ಪ್ರಧಾನಿ ಯಾಗುವುದು ಸ್ವಾಗತಾರ್ಹ ಎಂದು ಡಿಎಂಕೆಯಿಂದ ಅಮಾನತು­ಗೊಂಡಿರುವ ಎಂ.ಕೆ. ಅಳಗಿರಿ ಹೇಳಿದ್ದಾರೆ.

‘ದೇಶದಲ್ಲಿ ಮೋದಿ ಅಲೆ ಇದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಅವರೊಬ್ಬ ಒಳ್ಳೆಯ ಆಡಳಿತಗಾರ ಎನ್ನುವುದನ್ನು ನಾನು ಹಿಂದೆಯೇ ಹೇಳಿದ್ದೆ’ ಎಂದು ಅವರು ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಡಿಎಂಕೆ ದಕ್ಷಿಣ ವಲಯದ ಸಂಘ­ಟನಾ ಕಾರ್ಯದರ್ಶಿಯೂ ಆಗಿದ್ದ ಅಳಗಿರಿ ಅವರು ತಮ್ಮ ಮುಂದಿನ ರಾಜ­ಕೀಯ ನಡೆ ನಿರ್ಧರಿ­ಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿ, ಹೊಸ ಪಕ್ಷ ಸ್ಥಾಪಿಸುವ ಊಹಾ­ಪೋಹಕ್ಕೆ ತೆರೆ ಎಳೆದಿದ್ದಾರೆ. 

ತಮ್ಮ ತಂದೆ, ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರನ್ನು ‘ವಿಶ್ವಾಸ­ಘಾತುಕ’ ವ್ಯಕ್ತಿಗಳ ಕಪಿಮುಷ್ಠಿಯಿಂದ ರಕ್ಷಿಸುತ್ತೇನೆ’ ಎಂದು ಶಪಥ ಮಾಡಿದ್ದಾರೆ.  ‘ ನಾನು ಡಿಎಂಕೆಯೊಂದಿಗೆ ಇದ್ದೇನೆ. ಹೊಸ ಪಕ್ಷ ಸ್ಥಾಪನೆ ಮಾಡುವ ಅಗತ್ಯ ಈಗ ನನಗೆ ಇಲ್ಲ. ಕರುಣಾನಿಧಿ ವಿಶ್ವಾಸ­ಘಾತುಕರ ಕಪಿಮುಷ್ಠಿಯ­ಲ್ಲಿದ್ದಾರೆ. ಅವರನ್ನು ರಕ್ಷಿಸುವ ಅಗತ್ಯತೆ ಹೆಚ್ಚಿದೆ’ ಎಂದು ಪಕ್ಷದ ಖಜಾಂಚಿ ಮತ್ತು ಕರು­ಣಾನಿಧಿ ಅವರ ಉತ್ತರಾಧಿಕಾರಿ ಎಂದು ಬಿಂಬಿತವಾಗಿರುವ ಸ್ಟಾಲಿನ್‌ ಅವರನ್ನು ಗುರಿಯಾಗಿ­ಸಿಕೊಂಡು ಹೇಳಿದ್ದಾರೆ.

‘ಕರುಣಾನಿಧಿಗೆ  ಕಿರುಕುಳ’ : ‘ಪಕ್ಷದಿಂದ ಅಮಾ­ನತುಗೊಳಿಸಿ ಅನ್ಯಾಯವಾಗಿ ನನ್ನನ್ನು ಬಲಿಪಶು ಮಾಡ­­ಲಾಗಿದೆ. ನನ್ನ ತಂದೆ, ಡಿಎಂಕೆ ಮುಖ್ಯಸ್ಥ ಎಂ.­ಕರುಣಾನಿಧಿ ಅವರು ತಮ್ಮ ಜವಾ­ಬ್ದಾರಿ  ನಿರ್ವಹಿಸಲು ಪಕ್ಷ­ದೊಳಗಿರುವ ಒಂದು ಗುಂಪು ಬಿಡು­­ತ್ತಿಲ್ಲ’ ಎಂದು ಅವರು ಆಪಾದಿಸಿದ್ದಾರೆ.

‘ಕರುಣಾನಿಧಿ ಡಿಎಂಕೆ ಮುಖ್ಯಸ್ಥ­ರಾಗಿದ್ದರೂ ಅಧಿಕಾರ ಚಲಾ­ಯಿಸಲು ಪಕ್ಷದೊಳಗಿರುವ ವಿಶ್ವಾಸ­ಘಾತುಕರ ಗುಂಪು ಅವರಿಗೆ ಅವಕಾಶ ಕೊಡುತ್ತಿಲ್ಲ. ಆ ಗುಂಪು ಕರುಣಾನಿಧಿ ಅವರಿಗೆ ಕಿರಿಕಿರಿ­ಯನ್ನುಂಟು ಮಾಡುತ್ತಿದೆ’ ಎಂದರು. ‘ಪಕ್ಷದ ಆಂತರಿಕ ಚುನಾವಣೆಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ತಡೆಯಲು ಮುಂದಾಗಿದ್ದಕ್ಕೆ ನನ್ನನ್ನು ಪಕ್ಷದಿಂದ ಅಮಾನತುಗೊಳಿಸಲಾಯಿತು’ ಎಂದು ಅವರು ಅಳಲು ತೋಡಿಕೊಂಡರು.

ಮದುರೆ ಲೋಕಸಭಾ ಕ್ಷೇತ್ರ ಹಾಲಿ ಸಂಸದ ಅಳಗಿರಿ ಅವರಿಗೆ ಮುಂಬರುವ ಲೋಕಸಭಾ ಕ್ಷೇತ್ರದ ಚುನಾವಣೆಗೆ ಟಿಕೆಟ್‌ ನೀಡದಿರಲು ಪಕ್ಷ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.