ADVERTISEMENT

ಮೋದಿ ಸದ್ಭಾವನಾ ಉಪವಾಸ ಆರಂಭ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 18:45 IST
Last Updated 17 ಸೆಪ್ಟೆಂಬರ್ 2011, 18:45 IST

ಅಹಮದಾಬಾದ್ (ಪಿಟಿಐ): ದೇಶದಲ್ಲಿ `ವೋಟ್‌ಬ್ಯಾಂಕ್~ ರಾಜಕಾರಣ ಕೊನೆಯಾಗಬೇಕು ಎಂಬ ಘೋಷಣೆಯೊಂದಿಗೆ ಶಾಂತಿ ಮತ್ತು ಕೋಮು ಸೌಹಾರ್ದ ಸಂದೇಶ ಸಾರುವ ತಮ್ಮ ಮೂರು ದಿನಗಳ `ಸದ್ಭಾವನಾ ಉಪವಾಸ~ವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಶನಿವಾರ ಆರಂಭಿಸಿದರು.

ಇಲ್ಲಿನ ಗುಜರಾತ್ ವಿಶ್ವವಿದ್ಯಾಲಯದ ಸಭಾಭವನದಲ್ಲಿ ವಿಶೇಷವಾಗಿ ರೂಪಿಸಲಾದ ಹವಾನಿಯಂತ್ರಿತ ವೇದಿಕೆಯಲ್ಲಿ ಅವರು ಉಪವಾಸ ಕುಳಿತರು. ಇದಕ್ಕೂ ಮುನ್ನ ಬೆಳಿಗ್ಗೆ ತಮ್ಮ 62ನೇ ಜನ್ಮದಿನದ ಅಂಗವಾಗಿ ತಾಯಿಯ ಆಶೀರ್ವಾದ ಪಡೆದರು.

ವೇದಿಕೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ರಾಜನಾಥ ಸಿಂಗ್, ಅರುಣ್ ಜೇಟ್ಲಿ, ರವಿಶಂಕರ ಪ್ರಸಾದ್, ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ರಾಜೀವ್ ಪ್ರತಾಪ ರೂಢಿ ಇದ್ದರು. ಅಂತೆಯೇ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಎಐಎಡಿಎಂಕೆ ನಾಯಕರಾದ ಎಂ.ತಂಬಿದೊರೈ, ವಿ.ಮೈತ್ರೇಯನ್  ಹಾಗೂ ಇತರೆ ಎನ್‌ಡಿಎ ಮುಖಂಡರೂ ಹಾಜರಿದ್ದರು.

 ಬಿಜೆಪಿಯ ಮಿತ್ರಪಕ್ಷವಾದ ಜೆಡಿಯು ಮುಖಂಡರು ವೇದಿಕೆಯಲ್ಲಿರಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, `ಈ ಉಪವಾಸ ಯಾರ ವಿರುದ್ಧವೂ ಅಲ್ಲ~ ಎಂದು ಸ್ಪಷ್ಟಪಡಿಸಿದರು. ವೇದಿಕೆಯಲ್ಲಿ ಮುಸ್ಲಿಂ ಸಮುದಾಯವೂ ಸೇರಿದಂತೆ ಕ್ರಿಶ್ಚಿಯನ್, ಸಿಖ್, ಜೊರಾಸ್ಟ್ರಿಯನ್ ಮತ್ತು ಸ್ವಾಮಿ ನಾರಾಯಣ ಪಂಥದ ಧಾರ್ಮಿಕ ಮುಖಂಡರು ಕಂಡು ಬಂದರು.

ಮಲ್ಲಿಕಾ ಟೀಕೆ: ಮೋದಿ ಅವರ `ಸದ್ಭಾವನಾ ಉಪವಾಸ~ ಒಂದು ಗಿಮಿಕ್ ಎಂದು ಸಾಮಾಜಿಕ ಕಾರ್ಯಕರ್ತೆ ಮಲ್ಲಿಕಾ ಸಾರಾಭಾಯ್ ಟೀಕಿಸಿದ್ದಾರೆ.

ಜಯಾ ಬೆಂಬಲ: ಮೋದಿ ಉಪವಾಸ ಕಾರ್ಯಕ್ರಮಕ್ಕೆ ಎಐಎಡಿಎಂಕೆ ನೀಡಿರುವ ಬೆಂಬಲವನ್ನು ಬೇರಾವುದೇ ರೀತಿಯಲ್ಲಿ ಅರ್ಥೈಸುವ ಅಗತ್ಯವಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹೇಳಿದ್ದಾರೆ.

`ಉಪವಾಸದಲ್ಲಿ ಪಾಲ್ಗೊಳ್ಳಲು ಪಕ್ಷದಿಂದ ಪ್ರತಿನಿಧಿಯನ್ನು ಕಳುಹಿಸಿಕೊಡುವಂತೆ ಮೋದಿ ದೂರವಾಣಿ ಮೂಲಕ ತಮ್ಮನ್ನು ಕೋರಿದ್ದರು. ಅದಕ್ಕಾಗಿಯೇ ವಿ.ಮೈತ್ರೇಯನ್ ಮತ್ತು ತಂಬಿದೊರೈ ಅವರನ್ನು ಕಳುಹಿಸಿಕೊಡಲಾಗಿದೆ~ ಎಂದು ಜಯಲಲಿತಾ ಸ್ಪಷ್ಟಪಡಿಸಿದರು.

 ತುಷಾರ್ ಗಾಂಧಿ ಟೀಕೆ (ಮುಂಬೈ ವರದಿ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಉಪವಾಸ ಸತ್ಯಾಗ್ರಹವನ್ನು ಮಹಾತ್ಮ ಗಾಂಧೀಜಿಯವರ ಮರಿಮೊಮ್ಮಗ ತುಷಾರ್ ಗಾಂಧಿ ಶನಿವಾರ ಇಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾಪು ಅವರ ಉಪವಾಸ ಸತ್ಯಾಗ್ರಹವು ನಿಸ್ವಾರ್ಥದಿಂದ ಕೂಡಿದ್ದರೆ, ಮೋದಿಯವರ ಉಪವಾಸ ಸ್ವಾರ್ಥ ಮತ್ತು ಪ್ರಚಾರಪ್ರಿಯತೆಯಿಂದ ಕೂಡಿದೆಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.