ADVERTISEMENT

ಮೋದಿ ಹತ್ಯೆ ಸಂಚು ಹಾಸ್ಯಾಸ್ಪದ: ಶಿವಸೇನಾ ಲೇವಡಿ

ಪಿಟಿಐ
Published 11 ಜೂನ್ 2018, 19:34 IST
Last Updated 11 ಜೂನ್ 2018, 19:34 IST
ಮೋದಿ ಹತ್ಯೆ ಸಂಚು ಹಾಸ್ಯಾಸ್ಪದ: ಶಿವಸೇನಾ ಲೇವಡಿ
ಮೋದಿ ಹತ್ಯೆ ಸಂಚು ಹಾಸ್ಯಾಸ್ಪದ: ಶಿವಸೇನಾ ಲೇವಡಿ   

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿರುವ ಕುರಿತು ನಕ್ಸಲರು ಪತ್ರ ಬರೆದಿದ್ದಾರೆ ಎನ್ನುವುದು ‘ಹಾಸ್ಯಾಸ್ಪದ’ವಾಗಿದೆ ಎಂದು ಶಿವಸೇನಾ ಹೇಳಿದೆ.

‘ಮೋದಿ ಅವರ ಭದ್ರತೆ ಮೊಸಾದ್‌ನಷ್ಟು (ಇಸ್ರೇಲ್‌ನ ಗುಪ್ತಚರ ಸಂಸ್ಥೆ) ಸಮರ್ಥವಾಗಿದೆ. ಇದನ್ನು ಭೇದಿಸಲು ಅಸಾಧ್ಯ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸಹ ತಮ್ಮ ಸಚಿವಾಲಯವನ್ನು ಕೋಟೆಯಂತೆ ಮಾಡಿಕೊಂಡಿದ್ದಾರೆ. ಜನಸಾಮಾನ್ಯರ ಸಂಚಾರ ಸಹ ಇಲ್ಲಿ ಕಷ್ಟ’ ಎಂದು ಸೇನಾ ಹೇಳಿದೆ.

‘ಪ್ರಧಾನಿ, ಮುಖ್ಯಮಂತ್ರಿಗಳ ಭದ್ರತೆ ವಿಷಯ ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು. ನಕ್ಸಲರ ದಾಳಿಯಲ್ಲಿ ಲಕ್ಷಾಂತರ ಜನ ಮೃತಪಟ್ಟರೂ ತೊಂದರೆ ಇಲ್ಲ, ಇವರಿಗೆ ಭದ್ರತೆ ನೀಡಬೇಕು’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ವ್ಯಂಗ್ಯ ಮಾಡಲಾಗಿದೆ.

ADVERTISEMENT

ಮೋದಿ ಹಾಗೂ ಫಡಣವೀಸ್ ಅವರಿಗೆ ಜೀವ ಬೆದರಿಕೆ ಇದೆ ಎನ್ನುವ ಕುರಿತು ಲಘುವಾಗಿ ಪ್ರತಿಕ್ರಿಯಿಸಿರುವ ಶಿವಸೇನಾ, ‘ಬಿಜೆಪಿಯ ಒಂದು ವರ್ಗ ಮೋದಿ ಹಾಗೂ ಫಡಣವೀಸ್ ಅವರನ್ನು ಮುಳ್ಳುಗಳು ಎಂದು ಭಾವಿಸಿದ್ದು, ಅವರ ಹತ್ಯೆಗಾಗಿ ನಕ್ಸಲರಿಗೆ ಸುಪಾರಿ ನೀಡಿದೆ ಎಂದು ಕೆಲವರು ಹೇಳುತ್ತಾರೆ. ಇಂತಹ ಹೇಳಿಕೆಗಳಿಗೆ ಹೆಚ್ಚು ಪ್ರಾಮುಖ್ಯ ನೀಡಬಾರದು’ ಎಂದು ಹೇಳಿದೆ.

ಪ್ರಧಾನಿ ಭದ್ರತೆ ಹೆಚ್ಚಳ: ಪ್ರಧಾನಿ ನರೇಂದ್ರ ಮೋದಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಪ್ರಧಾನಿ ಜೀವಕ್ಕೆ ನಕ್ಸಲೀಯರಿಂದ ಬೆದರಿಕೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸೋಮವಾರ ಉನ್ನತಮಟ್ಟದ ಸಭೆ ನಡೆಸಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ, ಗುಪ್ತಚರ ಇಲಾಖೆ ನಿರ್ದೇಶಕ ರಾಜೀವ್‌ ಜೈನ್‌ ಅವರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಿಯ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜನಾಥ್‌ ಸಿಂಗ್‌ ಸೂಚಿಸಿದ್ದಾರೆ. ಭದ್ರತೆಯಲ್ಲಿ ಯಾವುದೇ ಲೋಪದೋಷ ಇರದಂತೆ ಎಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

**

ಅನುಕಂಪ ಗಿಟ್ಟಿಸಲು ಹತ್ಯೆ ಸಂಚಿನ ದಾಳ

ಜನಪ್ರಿಯತೆ ಕುಸಿಯುತ್ತಿರುವುದನ್ನು ಮನಗಂಡ ಬಿಜೆಪಿ ಜನರ ಅನುಕಂಪ ಗಿಟ್ಟಿಸಲು ಈ ಬಾರಿ ಹತ್ಯೆ ಸಂಚಿನ ಪತ್ರವನ್ನು ದಾಳವಾಗಿ ಬಳಸಲು ಮುಂದಾಗಿದೆ. ಇಂತಹ ತಂತ್ರಗಳಿಗೆ ಜನರು ಮರುಳಾಗಲಾರರು ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪ್ರತಿಕ್ರಿಯಿಸಿದ್ದಾರೆ.

ಪುಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾದ ಪತ್ರದ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಭದ್ರತೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಪ್ರಧಾನಿ ಮೋದಿ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ಪುಣೆಯ ಪೊಲೀಸರು ವಶಪಡಿಸಿಕೊಂಡ ಮಾವೊವಾದಿಗಳ ಪತ್ರದ
ವಿಶ್ವಾಸರ್ಹತೆಯ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

ಇಂತಹ ಪತ್ರಗಳನ್ನು ಸರಿಯಾಗಿ ಪರಿಶೀಲಿಸದೆ ಸರ್ಕಾರಿ ದಾಖಲೆಗಳು ಎಂಬಂತೆ ಪರಿಗಣಿಸುವುದು ಸರಿಯಲ್ಲ ಎಂದರು.

**

ಮೋದಿ ಹತ್ಯೆಯ ಸಂಚು ಒಂದು ಪ್ರಹಸನ. ಇದು ಹಾರರ್‌ ಸಿನಿಮಾದ ಕತೆಯಂತಿದೆ.

ಶರದ್‌ ಪವಾರ್‌, ಎನ್‌ಸಿಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.