ADVERTISEMENT

ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ನವದೆಹಲಿ: ಪ್ರತಿಷ್ಠಿತ `ಜೆಎಸ್‌ಡಬ್ಲ್ಯು~ ಹಾಗೂ `ಎಸ್‌ಡಬ್ಲ್ಯುಎಂಸಿ~ ಕಂಪೆನಿಗಳಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ಟ್ರಸ್ಟ್‌ಗಳಿಗೆ ಹಣ ವರ್ಗಾವಣೆ ಆಗಿರುವ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಡುತ್ತಿರುವ ಧಾರವಾಡ ಮೂಲದ ಸಮಾಜ ಪರಿವರ್ತನ ಸಮುದಾಯ (ಎಸ್‌ಪಿಎಸ್) ಆಗ್ರಹ ಮಾಡಿದೆ.

ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರ ಸಮಿತಿಗೆ ಸೋಮವಾರ ಎಸ್‌ಪಿಎಸ್ ಸಲ್ಲಿಸಿರುವ ಅರ್ಜಿಯಲ್ಲಿ, ಈ ಪ್ರಕರಣ ಕುರಿತು ಸಿಬಿಐ ತನಿಖೆ ನಡೆದರೆ ಇದರ ಹಿಂದಿರುವ ದೊಡ್ಡ ವ್ಯಕ್ತಿಗಳು ಬೆಳಕಿಗೆ ಬರಲಿದ್ದಾರೆ ಎಂದು ಹೇಳಿದೆ.

ಗಣಿ ಕಂಪೆನಿಗಳಿಂದ ಮಾಜಿ ಮುಖ್ಯಮಂತ್ರಿ ಕುಟುಂಬಕ್ಕೆ ಹಣ ವರ್ಗಾವಣೆ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಪುರಾವೆಗಳಿವೆ. ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆದರೆ ಸತ್ಯ ಬೆಳಕಿಗೆ ಬರಲಿದೆ ಎಂದು ಪ್ರತಿಪಾದಿಸಲಾಗಿದೆ.

ADVERTISEMENT

ಹಣ ವರ್ಗಾವಣೆ ಕುರಿತು ರಾಜ್ಯದ ಸಂಸ್ಥೆಗಳು ತನಿಖೆ ನಡೆಸಿವೆ. ಇದು ಗಂಭೀರವಾದ ಪ್ರಕರಣವಾದ್ದರಿಂದ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಎಸ್‌ಪಿಎಸ್‌ನ ಎಸ್.ಆರ್. ಹಿರೇಮಠ ಹಾಗೂ ವಿಷ್ಣು ಕುಮಾರ್ ಕೇಳಿದ್ದಾರೆ.

ಗಣಿ ಕಂಪೆನಿಗಳು ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿರುವ ಟ್ರಸ್ಟ್‌ಗೆ ಹಣ ಕೊಡಲು ಕಾರಣವೇನು? ಅದೇ ಸಮಯದಲ್ಲಿ ರಾಜ್ಯ ಸರ್ಕಾರ ಈ ಕಂಪೆನಿಗಳಿಗೆ ಅನುಕೂಲವಾಗುವ ನಿರ್ಣಯವನ್ನು ಏಕೆ ಕೈಗೊಂಡಿತು? ಇದರ ಹಿಂದಿರುವ ರಹಸ್ಯ ಬಯಲಿಗೆ ಬರಲು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಯಡಿಯೂರಪ್ಪ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ಆರೋಪ ಕುರಿತು ಸಿಬಿಐ ತನಿಖೆ ನಡೆಸುವ ಅಗತ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಿ ಅಗತ್ಯ ಶಿಫಾರಸು ಮಾಡುವಂತೆ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಹಸಿರು ಪೀಠ ಸಿಇಸಿಗೆ ಕೇಳಿದೆ. ಸಿಇಸಿ ವರದಿ ಆಧರಿಸಿ ನ್ಯಾಯಾಲಯ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.

ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ. 2007ರಲ್ಲಿ ಈ ಕಂಪೆನಿಗಳಿಗೆ ಗಣಿ ಗುತ್ತಿಗೆ ನೀಡಲು ಶಿಫಾರಸು ಮಾಡಿದಾಗ ಯಡಿಯೂರಪ್ಪ ಮುಖ್ಯಮಂತ್ರಿಯೂ ಅಲ್ಲ. ಗಣಿ ಸಚಿವರೂ ಆಗಿರಲಿಲ್ಲ ಎಂದು ರಾಜ್ಯ ಸರ್ಕಾರ ಸಿಇಸಿಗೆ ಈಚೆಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.