ADVERTISEMENT

ಯಶಸ್ವಿ ಉಡಾವಣೆ: ಇಸ್ರೊ ಹರ್ಷ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST
ಯಶಸ್ವಿ ಉಡಾವಣೆ: ಇಸ್ರೊ ಹರ್ಷ
ಯಶಸ್ವಿ ಉಡಾವಣೆ: ಇಸ್ರೊ ಹರ್ಷ   

ಶ್ರೀಹರಿಕೋಟಾ, (ಎಪಿ) (ಪಿಟಿಐ): ನಿಖರವಾದ ಜಾಗತಿಕ ತಾಪಮಾನ ಹಾಗೂ ಹವಾಮಾನ ಅರಿಯುವ ಉದ್ದೇಶದಿಂದ ಭಾರತ- ಫ್ರಾನ್ಸ್ ಜಂಟಿಯಾಗಿ 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮೇಘಾ ಟ್ರಾಪಿಕ್ಸ್ ಮತ್ತು ಇನ್ನಿತರ ಮೂರು ನ್ಯಾನೊ ಉಪಗ್ರಹಗಳನ್ನು ಬುಧವಾರ ಇಲ್ಲಿನ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಈ ಉಪಗ್ರಹಗಳನ್ನು ಹೊತ್ತ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ನಿರ್ಮಿತ ಉಪಗ್ರಹ ಉಡಾವಣಾ ವಾಹಕ (ಪಿಎಸ್‌ಎಲ್‌ವಿ- ಸಿ18) ಬೆಳಿಗ್ಗೆ 11 ಗಂಟೆಗೆ ಆಕಾಶಕ್ಕೆ ನೆಗೆಯಿತು.

26 ನಿಮಿಷಗಳ ನಂತರ ನಾಲ್ಕೂ ಉಪಗ್ರಹಗಳನ್ನು ಸರಿಯಾದ ಕಕ್ಷೆಗೆ ಸೇರಿಸುವಲ್ಲಿ ಸಫಲವಾಯಿತು. ಲಕ್ಸಂಬರ್ಗ್‌ನ ವೆಸೆಲ್ ಸ್ಯಾಟ್, ಚೆನ್ನೈನ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಎಸ್‌ಆರ್‌ಎಂ ಸ್ಯಾಟ್ ಮತ್ತು ಕಾನ್ಪುರ ಐಐಟಿಯ ಜುಗ್ನು ಹೆಸರಿನ ನ್ಯಾನೊ ಉಪಗ್ರಹಗಳು ಮೇಘಾ ಜತೆ ಕಕ್ಷೆ ಸೇರಿವೆ.

ADVERTISEMENT

ಯಶಸ್ವಿ ಉಡಾವಣೆಯ ನಂತರ ಪ್ರತಿಕ್ರಿಯೆ ನೀಡಿದ ಇಸ್ರೊ ಅಧ್ಯಕ್ಷ ಕೆ.ರಾಧಾಕೃಷ್ಣನ್ `ಇದೊಂದು ದೊಡ್ಡ ಯಶಸ್ಸು. ಎಲ್ಲವೂ ನಾವು ಅಂದುಕೊಂಡಂತೆ ನಡೆದಿದೆ~ ಎಂದು ಹರ್ಷ ವ್ಯಕ್ತಪಡಿಸಿದರು.

`ಕಕ್ಷೆಯಲ್ಲಿರುವ ಶಿಲೆಯ ಚೂರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಉದ್ದೇಶದಿಂದ ಪಿಎಸ್‌ಎಲ್‌ವಿ ರಾಕೆಟ್ ಅನ್ನು ಒಂದು ನಿಮಿಷ ತಡವಾಗಿ ಹಾರಿ ಬಿಡಲಾಯಿತು. ಫೆಬ್ರುವರಿಯಿಂದ ಉಪಗ್ರಹಗಳು ಕಳುಹಿಸುವ ಅಂಕಿಂಶಗಳ ಅಧ್ಯಯನ ಸಾಧ್ಯವಾಗಲಿದೆ~ ಎಂದು ಅವರು ತಿಳಿಸಿದರು.  

ಉಪಗ್ರಹಗಳಿಂದ ಕೇವಲ ಭಾರತಕ್ಕೆ ಮಾತ್ರವಲ್ಲ, ಹಿಂದೂ ಮಹಾಸಾಗರದ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಹವಾಮಾನ ಬದಲಾವಣೆ, ಮೋಡ, ಜಲಚಕ್ರ ಇತ್ಯಾದಿಗಳನ್ನು ಅರಿಯಲು ನೆರವಾಗಲಿದೆ. ಫ್ರಾನ್ಸ್‌ನ ಸಿಎನ್‌ಇಸಿ ಕೂಡ ಸಮವಾಗಿ ಉಪಗ್ರಹ ನಿರ್ಮಾಣ ವೆಚ್ಚವನ್ನು ಭರಿಸಿದೆ.

ವಿಕೋಪದ ಮಾಹಿತಿ: ಮೇಘಾ ಟ್ರಾಪಿಕ್ಸ್ ನಿಖರವಾದ ಹವಾಮಾನ, ಮಳೆ, ಮೋಡಗಳ ಬಗ್ಗೆ ತಿಳಿಸಲಿದೆ. ಕಾನ್ಪುರ ಐಐಟಿ ನಿರ್ಮಿಸಿರುವ ಮೂರು ಕೆ.ಜಿ ಭಾರದ `ಜುಗ್ನು~ ಉಪಗ್ರಹದಲ್ಲಿ ವಿಶೇಷ ಕ್ಯಾಮೆರಾ ಅಳವಡಿಸಲಾಗಿದ್ದು ಭೂಮಿಯ ಮೇಲಿನ ಸಸ್ಯರಾಶಿ, ಜಲರಾಶಿಗಳ ಚಿತ್ರಗಳನ್ನು ಸೆರೆ ಹಿಡಿಯಲಿದೆ. ಪ್ರವಾಹ, ಪ್ರಕೃತಿ ವಿಕೋಪಗಳ ಬಗ್ಗೆ ಮಾಹಿತಿ ನೀಡಲಿದೆ.

10.9 ಕೆ.ಜಿ ಭಾರದ ಎಸ್‌ಆರ್‌ಎಂ ಸ್ಯಾಟ್ ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಮತ್ತು ನೀರಿನ ಅಂಶದ ವಿವರ ನೀಡಲಿದೆ. ಲಕ್ಸಂಬರ್ಗ್‌ನ ವೆಸಲ್ ಸ್ಯಾಟ್-1 ಹಡಗುಗಳಿಂದ ಹೊರಡುವ ಸಂದೇಶಗಳನ್ನು ಪತ್ತೆಹಚ್ಚಲು ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.