ADVERTISEMENT

ಯುದ್ಧವಿಮಾನಗಳಿಗೆ ರನ್‌ವೇಯಾದ ಹೆದ್ದಾರಿ

ಪಿಟಿಐ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಹೆದ್ದಾರಿಯನ್ನು ಸ್ಪರ್ಶಿಸಿದ ಮಿರಾಜ್–2000 ಯುದ್ಧವಿಮಾನ –ಪಿಟಿಐ ಚಿತ್ರ
ಹೆದ್ದಾರಿಯನ್ನು ಸ್ಪರ್ಶಿಸಿದ ಮಿರಾಜ್–2000 ಯುದ್ಧವಿಮಾನ –ಪಿಟಿಐ ಚಿತ್ರ   

ನವದೆಹಲಿ: ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಯು ತನ್ನ ಯುದ್ಧ ವಿಮಾನಗಳು ಮತ್ತು ಸರಕು ಸಾಗಣೆ ವಿಮಾನಗಳನ್ನು ಇಳಿಸಿ–ಹಾರಿಸಿ ಮಂಗಳವಾರ ಕವಾಯತು ನಡೆಸಿತು.

ವಾಯುಪಡೆಯ ಸಿ–130 ಜೆ ಸೂಪರ್‌ ಹರ್ಕ್ಯುಲಸ್ ಸರಕು ಸಾಗಣೆ ವಿಮಾನ, ಮಿರಾಜ್–2000 ಮತ್ತು ಸುಖೋಯ್–30 ಯುದ್ಧವಿಮಾನಗಳು ಕವಾಯತಿನಲ್ಲಿ ಭಾಗವಹಿಸಿದವು.

‘ಯುದ್ಧ ಮತ್ತು ಸಂಘರ್ಷದಂತಹ ಸಂದರ್ಭದಲ್ಲಿ ಎದುರಾಳಿ ಪಡೆಗಳು ಮೊದಲು ವಾಯುನೆಲೆಗಳ ಮೇಲೆ ದಾಳಿ ನಡೆಸುತ್ತವೆ. ಅಂತಹ ಸಂದರ್ಭದಲ್ಲಿ ಹೆದ್ದಾರಿಗಳನ್ನೇ ರನ್‌ವೇಯಂತೆ ಹೇಗೆ ಬಳಸಬಹುದು ಎಂಬುದರ ಪ್ರಾತ್ಯಕ್ಷಿಕೆಯನ್ನು ಈ ಕವಾಯತಿನ ಮೂಲಕ ತೋರಿಸಲಾಗಿದೆ' ಎಂದು ವಾಯುಪಡೆ ತಿಳಿಸಿದೆ.

ADVERTISEMENT

12 ರಾಷ್ಟ್ರೀಯ ಹೆದ್ದಾರಿ ಏರ್‌ಸ್ಟ್ರಿಪ್‌ಗಳು...

ದೇಶದ 17 ರಾಷ್ಟ್ರೀಯ ಹೆದ್ದಾರಿಗಳನ್ನು ತುರ್ತು ಏರ್‌ಸ್ಟ್ರಿಪ್‌ಗಳಾಗಿ ಪರಿವರ್ತಿಸುವ ಪ್ರಸ್ತಾವ ರಕ್ಷಣಾ ಸಚಿವಾಲಯದ ಮುಂದಿತ್ತು. ವಾಯುಪಡೆಯ ತಜ್ಞರ ತಂಡವು ಈ ಪ್ರಸ್ತಾವವನ್ನು ಕೂಲಂಕಷವಾಗಿ ಪರಿಶೀಲಿಸಿ 12 ಹೆದ್ದಾರಿಗಳನ್ನು ಹೀಗೆ ಪರಿವರ್ತಿಸಲು ಸಾಧ್ಯ ಎಂದು ಜುಲೈನಲ್ಲಿ ವರದಿ ನೀಡಿತ್ತು. ರಾಷ್ಟ್ರೀಯ ಹೆದ್ದಾರಿಗಳನ್ನು ಏರ್‌ಸ್ಟ್ರಿಪ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದೆ.

ಜಮ್‌ಶೆಡ್‌ಪುರ–ಬಾಲಸೋರ್‌ ಮತ್ತು ಚತ್ತಾರ್‌ಪುರ–ಡಿಘಾ ಹೆದ್ದಾರಿಗಳು
ಕಿಶನ್‌ಗಂಜ್–ಇಸ್ಲಾಂಪುರ ಹೆದ್ದಾರಿ
ದೆಹಲಿ–ಮೊರದಾಬಾದ್ ಹೆದ್ದಾರಿ
ಬಿಜಬೆಹಾರ– ಚಿನಾರ್ ಬಾಗ್ ಹೆದ್ದಾರಿ

ರಾಂಪುರ–ಕಾಟಗೋದಾಮ್ ಹೆದ್ದಾರಿ
ಲಖನೌ–ವರಾಣಸಿ ಹೆದ್ದಾರಿ

ದ್ವಾರಕಾ– ಮಿಯಾ ಹೆದ್ದಾರಿ

ಖರಗಪುರ– ಕ್ಯೋಂಜರ್ ಹೆದ್ದಾರಿ
ಮೋಹನ್‌ಬಾರಿ–ತಿನ್ಸೂಕಿಯಾ ಹೆದ್ದಾರಿ

ವಿಜಯವಾಡಾ–ರಾಜಮುಂಡ್ರಿ ಹೆದ್ದಾರಿ

ಚೆನ್ನೈ–ಪುದುಚೇರಿ ಹೆದ್ದಾರಿ

ಫಲೋಡಿ–ಜೈಸಲಮೆರ್ ಹೆದ್ದಾರಿ

ಹೆದ್ದಾರಿ ಹೀಗಿದ್ದರೆ ಪರಿವರ್ತಿಸಬಹುದು

* 3–3.5 ಕಿ.ಮೀ.ನಷ್ಟು ದೂರ ನೇರವಾಗಿರಬೇಕು

* ನೆಲಮಟ್ಟದಿಂದ ರಸ್ತೆ ಎತ್ತರದಲ್ಲಿರಬೇಕು

* ಏರ್‌ಸ್ಟ್ರಿಪ್ ನಿರ್ಮಿಸುವ ಹೆದ್ದಾರಿಯ ಭಾಗದ ಸುತ್ತಮುತ್ತಲ ಪ್ರದೇಶವನ್ನು ತೆರವು ಮಾಡಬೇಕು

* ಹೆದ್ದಾರಿಯ ರಸ್ತೆ ವಿಭಜಕಗಳನ್ನು ತೆರವು ಮಾಡುವಂತೆ ನಿರ್ಮಿಸಿರಬೇಕು

* 140 ಅಡಿ/ ರಸ್ತೆ ವಿಭಜಕ ತೆರವು ಮಾಡಿದಾಗ ಇರಬೇಕಾದ ಹೆದ್ದಾರಿಯ ಅಗಲ

* 4 ಅಡಿ/ ರಸ್ತೆಯ ದಪ್ಪ

* ಹೆದ್ದಾರಿಯನ್ನು ಏರ್‌ಸ್ಟ್ರಿಪ್‌ ಆಗಿ ಬಳಸುವುದಕ್ಕೂ ಕನಿಷ್ಠ 48 ಗಂಟೆ ಮೊದಲು ಸೂಚನೆ ನೀಡಬೇಕು. ಆನಂತರ ಆ ಭಾಗದಲ್ಲಿರುವ ವಿಭಜಕವನ್ನು ತೆರವು ಮಾಡಲಾಗುತ್ತದೆ. ಜತೆಗೆ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಿದ್ದಿರುವ ಕಸ, ಮರಳು ಮತ್ತು ಕಲ್ಲನ್ನು ತೆರವು ಮಾಡಲಾಗುತ್ತದೆ. ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗುತ್ತದೆ

ವಾಯುಪಡೆಗಳ ದೈತ್ಯ ಸಿ–130 ಸೂಪರ್‌ ಹರ್ಕ್ಯುಲಸ್

ಸಿ–130 ಜೆ ಸೂಪರ್‌ ಹರ್ಕ್ಯುಲಸ್ ವಿಮಾನಕ್ಕೆ ವಾಯುಪಡೆಗಳ ದೈತ್ಯ ಎಂಬ ಹೆಸರಿದೆ. ಅಮೆರಿಕ ಮೂಲದ ಈ ವಿಮಾನವನ್ನು ವಿಶ್ವದ ಅನೇಕ ದೇಶಗಳ ವಾಯುಪಡೆಗಳು ಬಳಸುತ್ತವೆ. ದೈತ್ಯ ಸ್ವರೂಪ ಮತ್ತು ಭಾರಿ ಸಾಮರ್ಥ್ಯ ಈ ವಿಮಾನಕ್ಕೆ ಅಂತಹ ಮಹತ್ವ ತಂದುಕೊಟ್ಟಿದೆ. ಮಂಗಳವಾರದ ಸಮರಭ್ಯಾಸದಲ್ಲಿ ಈ ವಿಮಾನವನ್ನು ಬಳಸಲಾಗಿತ್ತು. ಸುಖೋಯ್ ಮತ್ತು ಮಿರಾಜ್‌ಗಳನ್ನು ಹೆದ್ದಾರಿಯಲ್ಲಿ ಇಳಿಸಿ–ಹಾರಿಸುವ ಕಸರತ್ತುಗಳನ್ನು ಈಗಾಗಲೆ ಮೂರು ಬಾರಿ ಮಾಡಲಾಗಿದೆ. ಆದರೆ ಸಿ–130ಯನ್ನು ನಮ್ಮ ವಾಯುಪಡೆ ಹೆದ್ದಾರಿಯಲ್ಲಿ ಇಳಿಸಿದ್ದು ಇದೇ ಮೊದಲು. ಇದು ಮಂಗಳವಾರದ ಅಭ್ಯಾಸದ ಮಹತ್ವದ ಭಾಗವಾಗಿತ್ತು.

* ದೊಡ್ಡ ವಿಮಾನವಾಗಿದ್ದರೂ ಕಡಿಮೆ ದೂರದ ರನ್‌ವೇಯಲ್ಲೂ ಇಳಿಯಲು ಇದು ಶಕ್ತ

* ಸೂಕ್ತ ರನ್‌ವೇ ಇಲ್ಲದಿದ್ದರೂ ಈ ವಿಮಾನವನ್ನು ಇಳಿಸಬಹುದು–ಹಾರಿಸಬಹುದು

* ಸೇನಾ ಕಾರ್ಯಾಚರಣೆ, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬಳಸಬಹುದು

5,250 ಕಿ.ಮೀ -ಒಮ್ಮೆ ಇಂಧನ ಭರ್ತಿ ಮಾಡಿದರೆ ಕ್ರಮಿಸುವ ದೂರ

200 -ಸೈನಿಕರನ್ನು ಒಮ್ಮೆಗೇ ಹೊತ್ತೊಯ್ಯುವ ಸಾಮರ್ಥ್ಯ

3 -ಸಶಸ್ತ್ರ ಜೀಪ್‌ಗಳನ್ನು ಹೊತ್ತೊಯ್ಯಬಲ್ಲದು

20 ಟನ್ ಭಾರ ಹೊರುವ ಸಾಮರ್ಥ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.