ADVERTISEMENT

ಯುನಿನಾರ್ ಸಂಸ್ಥೆ ಹೇಳಿಕೆ: 2ಜಿ ಹರಾಜಿನಲ್ಲಿ ಪಾಲ್ಗೊಳ್ಳಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ನಾರ್ವೆಯ ಟೆಲಿನಾರ್ ಮತ್ತು ಯುನಿಟೆಕ್‌ನ ಜಂಟಿ ಸಹಭಾಗಿತ್ವದ ಯುನಿನಾರ್ ಸಂಸ್ಥೆಯು 2ಜಿ ತರಂಗಾಂತರ ಹಂಚಿಕೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.

ಆದರೆ ಇದೇ ಸಂದರ್ಭದಲ್ಲಿ ಭಾರತದ ಮಾರುಕಟ್ಟೆಯಿಂದ ಹಿಂದೆ ಸರಿಯುವ ತನ್ನ ಆಯ್ಕೆಯನ್ನೂ ಕಾಯ್ದಿರಿಸಿಕೊಂಡಿದೆ. `ಮೂಲಭೂತವಾಗಿ ನಾವು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದೇವೆ. ಎಲ್ಲಾ ಪ್ರಕ್ರಿಯೆಯಲ್ಲಿ ಯಶಸ್ವಿಯಾಗುತ್ತೇವೆ ಎಂದು ಹೇಳುವುದಿಲ್ಲ. ಹಾಗಾಗಿ ಭಾರತದ ಮಾರುಕಟ್ಟೆಯಿಂದ ಹಿಂದೆ ಸರಿಯುವುದನ್ನು ತಳ್ಳಿಹಾಕುವಂತಿಲ್ಲ~ ಎಂದು ಟೆಲಿನಾರ್ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಿಗ್ವೆ ಬ್ರೆಕ್ಕೆ ಸುದ್ದಿಗಾರರಿಗೆ ತಿಳಿಸಿದರು.

ಹರಾಜು ಪ್ರಕ್ರಿಯೆಯಲ್ಲಿ ಸ್ಪೆಕ್ಟ್ರಂನ ಮೂಲ ದರ ಮತ್ತು ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಕಡಿಮೆಯಾಗದ ದರಗಳ ಆಧಾರದ ಮೇಲೆ ಕಂಪೆನಿ ಆಡಳಿತ ವರ್ಗ ತನ್ನ ಕಾರ್ಯತಂತ್ರವನ್ನು ರೂಪಿಸಲಿದೆ ಎಂದರು.
 ದೂರ ಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ಅವರ ಅವಧಿಯಲ್ಲಿ 2008ರಲ್ಲಿ ಯೂನಿನಾರ್ ಸೇರಿದಂತೆ ವಿವಿಧ ಕಂಪೆನಿಗಳಿಗೆ ಹಂಚಿಕೆ ಮಾಡಿದ್ದ 122 ಪರವಾನಗಿಗಳನ್ನು ಅಕ್ರಮ ಎಂದು ಅವುಗಳನ್ನು ಕಳೆದ ವಾರ ಸುಪ್ರೀಂ ಕೋರ್ಟ್ ರದ್ದು ಪಡಿಸಿತ್ತು.

ಈ ಎಲ್ಲಾ ಪರವಾನಗಿಗಳನ್ನು ನಾಲ್ಕು ತಿಂಗಳ ಒಳಗೆ ಪುನಃ ಹರಾಜು ಹಾಕಲು ಅಗತ್ಯ ಇರುವ ಶಿಫಾರಸುಗಳನ್ನು ಮಾಡುವಂತೆ ಕೋರ್ಟ್ ಸರ್ಕಾರ ಮತ್ತು ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಗೆ ಸೂಚನೆ ನೀಡಿತ್ತು.

ಎಲ್ಲಾ ವೃತ್ತಗಳ ಹರಾಜಿನಲ್ಲಿಯೂ ಯುನಿನಾರ್ ಪಾಲ್ಗೊಳ್ಳುವುದೇ ಎನ್ನುವ ಪ್ರಶ್ನೆಗೆ, `ಈ ಸಂದರ್ಭದಲ್ಲಿ ಇಂತಹ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ನಾವು ಹರಾಜಿನಲ್ಲಿ ಪಾಲ್ಗೊಳ್ಳುತ್ತೇವೆಯೋ ಇಲ್ಲವೊ ಎನ್ನುವುದನ್ನು ಆಡಳಿತ ಮಂಡಳಿ ತೀರ್ಮಾನಿಸಬೇಕಾಗಿದೆ. ಇದೆಲ್ಲವೂ ಸರ್ಕಾರ ನಿಗದಿ ಮಾಡುವ ಮೂಲ ದರದ ಮೇಲೆ ಅವಲಂಬಿಸಿದೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.