ADVERTISEMENT

ಯೋಧರ ವಿರುದ್ಧ ಕಾನೂನು ಕ್ರಮ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ಕೊಚ್ಚಿ (ಪಿಟಿಐ): ಇಟಲಿಯ ನೌಕಾಪಡೆಯ ಯೋಧರಿಂದ ಹತ್ಯೆಗೀಡಾದ ಇಬ್ಬರು ಮೀನುಗಾರರ ಕುಟುಂಬಕ್ಕೆ ಇಟಲಿ ಸರ್ಕಾರ ಮಂಗಳವಾರ ಹಠಾತ್ತಾಗಿ ಒಂದು ಕೋಟಿ ರೂಪಾಯಿ ಪರಿಹಾರ ಧನ ನೀಡಿದೆ. ಆದರೆ ಯೋಧರ ವಿರುದ್ಧದ ಕ್ರಿಮಿನಲ್ ಪ್ರಕರಣ ಮಾತ್ರ ಮುಂದುವರಿಯಲಿದೆ.

ಯೋಧರ ವಿರುದ್ಧದ ಎಫ್‌ಐಆರ್ ಕೈ ಬಿಡುವಂತೆ ಕೋರಿ ಮೃತ ಮೀನುಗಾರರಾದ ವೆಲೆಂಟೈನ್ ಜಲಸ್ಟೈನ್ ಮತ್ತು ಅಜೇಶ್ ಬಿಂಕಿ ಕುಟುಂಬದ ಸದಸ್ಯರು ಸಲ್ಲಿಸಿದ ಅರ್ಜಿಗೆ ಕೇರಳ ಹೈಕೋರ್ಟ್ ಒಪ್ಪಿಗೆ ಸೂಚಿಸಿದೆ.

ಆದಾಗ್ಯೂ, ಆರೋಪಿ ಯೋಧರ ವಿರುದ್ಧ ಸಲ್ಲಿಸಿರುವ ಕ್ರಿಮಿನಲ್ ಪ್ರಕರಣದಲ್ಲಿ ಮೀನುಗಾರರ ಕುಟುಂಬ ಪ್ರತಿವಾದಿಯಾಗಿರಲಿಲ್ಲ. ರಾಜ್ಯ ಸರ್ಕಾರದಿಂದಲೇ ಈ ಪ್ರಕರಣ ದಾಖಲಾಗಿದ್ದು, ಪರಿಹಾರ ನೀಡಿರುವುದಕ್ಕೂ ಕ್ರಿಮಿನಲ್ ಪ್ರಕರಣಕ್ಕೂ ಸಂಬಂಧವಿಲ್ಲ ಮತ್ತು ಈ ಪ್ರಕರಣ ಮುಂದುವರಿಯಲಿದೆ ಎಂದು ಅಡ್ವೊಕೇಟ್ ಜನರಲ್ ಕೆ.ಪಿ. ದಂಡಪಾಣಿ ಹೇಳಿದ್ದಾರೆ. ಇಟಲಿ ಅಧಿಕಾರಿಗಳು ಹೈಕೋರ್ಟ್‌ನ ಲೋಕ್ ಅದಾಲತ್‌ಗೆ ಈ ಮೊತ್ತದ ಡಿಡಿಯನ್ನು ಹಸ್ತಾಂತರಿಸಿದರು.

ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದಾಗಿ ಇಟಲಿ ಅಧಿಕಾರಿಗಳು ಮತ್ತು ಮೀನುಗಾರರ ಕುಟುಂಬಗಳು ಒಪ್ಪಿಗೆ ಸೂಚಿಸಿದ್ದವು. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿತ್ತು.

ಮೀನುಗಾರರನ್ನು ಹತ್ಯೆಗೈದ ಯೋಧರನ್ನು ಕ್ಷಮಿಸಲಾಗಿದೆ ಎಂಬ ಪತ್ರವನ್ನು ಮೀನುಗಾರರ ಕುಟುಂಬದವರು ಇಟಲಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.