ADVERTISEMENT

ಯೋಧರ ಹತ್ಯೆ: ಭಾರತ ಪ್ರತಿಭಟನೆ

ಪಾಕಿಸ್ತಾನದ ಧೋರಣೆಗೆ ಖಂಡನೆ

ಪಿಟಿಐ
Published 23 ಅಕ್ಟೋಬರ್ 2018, 17:20 IST
Last Updated 23 ಅಕ್ಟೋಬರ್ 2018, 17:20 IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸುಂದರಬಾನಿ ವಲಯದಲ್ಲಿ ಈಚೆಗೆ ಪಾಕಿಸ್ತಾನದ ಉಗ್ರರು ನುಸುಳಿದಾಗ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಯೋಧರು ಸಾವಿಗೀಡಾಗಿರುವ ಬಗ್ಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪಾಕಿಸ್ತಾನ ಹೈಕಮಿಷನ್‌ ಕಚೇರಿಯ ಹಿರಿಯ ಅಧಿಕಾರಿಯನ್ನು ಮಂಗಳವಾರ ವಿದೇಶಾಂಗ ಸಚಿವಾಲಯದದ ಕಚೇರಿಗೆ ಕರೆಯಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಲಾಯಿತು.

ಭಯೋತ್ಪಾದನೆಗೆ ಪಾಕಿಸ್ತಾನ ನಿರಂತರವಾಗಿ ನೆರವು ಮತ್ತು ಪ್ರಚೋದನೆ ನೀಡುತ್ತಿದೆ. ಇದರಿಂದ, ಭಯೋತ್ಪಾದಕ ಕೃತ್ಯಗಳು ಮುಂದುವರಿದಿವೆ. ಇನ್ನೊಂದೆಡೆ ಭಾರತದ ಜತೆ ಶಾಂತಿ ಮಾತುಕತೆ ನಡೆಸುವುದಾಗಿ ಮತ್ತು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದಾಗಿ ಪೊಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಇದು ಪಾಕಿಸ್ತಾನದ ದ್ವಿಮುಖ ನೀತಿಯನ್ನು ಬಿಂಬಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಕಟುವಾಗಿ ಟೀಕಿಸಿದೆ.

ADVERTISEMENT

‘ಅಕ್ಟೋಬರ್‌ 21ರಂದು ಇಬ್ಬರು ಶಸ್ತ್ರಸಜ್ಜಿತ ಪಾಕಿಸ್ತಾನದ ಒಳನುಸುಳುಕೋರರನ್ನು ಎನ್‌ಕೌಂಟರ್‌ನಲ್ಲಿ ಭಾರತೀಯ ಪಡೆಗಳು ಹತ್ಯೆ ಮಾಡಿವೆ. ಪಾಕಿಸ್ತಾನ ಸರ್ಕಾರ ತನ್ನ ರಾಷ್ಟ್ರದ ಈ ಇಬ್ಬರು ನಾಗರಿಕರ ಮೃತದೇಹಗಳನ್ನು ಪಡೆದುಕೊಳ್ಳಬೇಕು’ ಎಂದು ಸೂಚಿಸಿದೆ.

‘ಪಾಕಿಸ್ತಾನ ಪದೇ ಪದೇ ಕದನವಿರಾಮವನ್ನು ಉಲ್ಲಂಘಿಸುತ್ತಿದೆ. 2018ರಲ್ಲಿ ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ 1591 ಬಾರಿ ಕದನವಿರಾಮ ಉಲ್ಲಂಘಿಸಿದೆ’ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.