ADVERTISEMENT

ರಕ್ಷಣಾ ಸಚಿವರ ಕಚೇರಿ ಸಂಭಾಷಣೆ ಕದ್ದಾಲಿಕೆ?

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ರಕ್ಷಣಾ ಸಚಿವ ಎ. ಕೆ. ಆಂಟನಿ ಅವರ ಕಚೇರಿಯ ಸಂಭಾಷಣೆಗಳನ್ನು ಕದ್ದಾಲಿಸಲಾಗುತ್ತಿತ್ತು ಎಂಬ ವರದಿ ತಡವಾಗಿ ಬೆಳಕಿಗೆ ಬಂದಿದ್ದು, ರಕ್ಷಣಾ ಸಚಿವಾಲಯ ಈ ಘಟನೆ ನಿರಾಕರಿಸುವುದರೊಂದಿಗೆ ಈ ವಿದ್ಯಮಾನ ವಿಚಿತ್ರ ತಿರುವು ಪಡೆದಿದೆ.

`ರಕ್ಷಣಾ ಸಚಿವರ ಕೋಣೆಯ ಸಂಭಾಷಣೆಗಳನ್ನು ಕದ್ದಾಲಿಸುವ ಘಟನೆ ಫೆ. 16ರಂದು ಬೆಳಕಿಗೆ ಬಂದಿತ್ತು. ಸೇನಾ ಬೇಹುಗಾರಿಕಾ ವಿಭಾಗದ ಇಬ್ಬರು ಸಿಬ್ಬಂದಿ ರಕ್ಷಣಾ ಸಚಿವಾಲಯದ ದೂರವಾಣಿ ಜಾಲವನ್ನು ತಪಾಸಣೆಗೆ ಒಳಪಡಿಸಿದಾಗ  ಅವರ `ಗೂಢಚರ್ಯೆ ಪತ್ತೆ ಉಪಕರಣ~ ಬೀಪ್ ಸದ್ದು ಹೊರಡಿಸಿತ್ತು. ಹಾಗಾಗಿ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿ ಗಾಬರಿಯಾಗಿದ್ದರು~ ಎಂದು ನಿಯತಕಾಲಿಕವೊಂದು ಗುರುವಾರ ವರದಿ ಪ್ರಕಟಿಸಿತ್ತು.

`ಕೂಡಲೇ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮಾ ಈ ಕುರಿತು ತನಿಖೆ ನಡೆಸುವಂತೆ ಗುಪ್ತಚರ ದಳಕ್ಕೆ ಸೂಚನೆ ನೀಡಿದ್ದರು. ಆದರೆ, ಈ ವಿದ್ಯಮಾನ ಬೆಳಕಿಗೆ ಬಂದ ನಂತರ ಸೇನಾ ಸಿಬ್ಬಂದಿಯಿಂದ ತಮ್ಮ ದೂರವಾಣಿ ಸಂಪರ್ಕವನ್ನು ತಪಾಸಣೆ ಮಾಡಿಕೊಳ್ಳಲು ರಕ್ಷಣಾ ಸಚಿವಾಲಯದ ಅಧಿಕಾರಿಗಳು ನಿರಾಕರಿಸಿದರು~ ಎಂದೂ ವರದಿಯಾಗಿತ್ತು.

ನಿರಾಕರಣೆ: ಆದರೆ, ರಕ್ಷಣಾ ಸಚಿವರ ಕಚೇರಿಯಲ್ಲಿ ಗೂಢಚರ್ಯೆ ನಡೆದಿತ್ತು ಎಂಬ ಪ್ರಕರಣವನ್ನು ಸಚಿವಾಲಯ ಅಲ್ಲಗಳೆದಿದೆ.  ರಕ್ಷಣಾ ಸಚಿವರ ಹಾಗೂ ಸೌತ್ ಬ್ಲಾಕ್‌ನ ಇತರ ಅಧಿಕಾರಿಗಳ ಕಚೇರಿಯಲ್ಲಿ ನಿಯಮಿತವಾಗಿ ತಪಾಸಣೆ ನಡೆಯುತ್ತದೆ. ಗೂಢಚರ್ಯೆ ನಡೆದ ಯಾವುದೇ ಕುರುಹು, ಉಪಕರಣಗಳು ಪತ್ತೆಯಾಗಿಲ್ಲ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಪ್ರಕರಣದ ಕುರಿತು ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಕಚೇರಿಯಲ್ಲೂ ಗೂಢಚರ್ಯೆ ನಡೆದ ಕುರುಹುಗಳು ಪತ್ತೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.