ADVERTISEMENT

ರಶ್ದಿ ಜೊಳ್ಳು, ಕೀಳು ದರ್ಜೆ ಸಾಹಿತಿ - ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST
ರಶ್ದಿ ಜೊಳ್ಳು, ಕೀಳು ದರ್ಜೆ ಸಾಹಿತಿ -  ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು
ರಶ್ದಿ ಜೊಳ್ಳು, ಕೀಳು ದರ್ಜೆ ಸಾಹಿತಿ - ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು   

ನವದೆಹಲಿ (ಪಿಟಿಐ): `ವಿವಾದಾತ್ಮಕ ಸಾಹಿತಿ ಸಲ್ಮಾನ್ ರಶ್ದಿ ಕೇವಲ ಜೊಳ್ಳು ಸಾಹಿತಿ, ಮಾತ್ರವಲ್ಲ ಅವರೊಬ್ಬ ಕೀಳುದರ್ಜೆಯ ಸಾಹಿತಿಯೂ ಹೌದು~ ಎಂದು ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಟೀಕಿಸಿದ್ದಾರೆ. 

ಜೈಪುರ ಸಾಹಿತ್ಯ ಉತ್ಸವದಲ್ಲಿ ರಶ್ದಿ ಅವರಿಗೆ ನಿಷೇಧ ಹೇರಿದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಾಹಿತ್ಯ ವಲಯದಲ್ಲಿ ಅಪರಿಚಿತರಾಗಿದ್ದ ರಶ್ದಿ ತಮ್ಮ ವಿವಾದಾತ್ಮಕ `ಸೆಟಾನಿಕ್ ವರ್ಸಸ್~ ಕೃತಿಯಿಂದಾಗಿಯೇ ಖ್ಯಾತಿ ಗಳಿಸಿದರು ಎಂದು ಹೇಳಿದ್ದಾರೆ.

ಇದೇ ವೇಳೆ ರಶ್ದಿ ಅವರ ಭಾರತೀಯ ಅಭಿಮಾನಿಗಳತ್ತ ಚಾಟಿಯೇಟು ಬೀಸಿರುವ ಖಟ್ಜು, `ಲಂಡನ್ ಅಥವಾ ನ್ಯೂಯಾರ್ಕ್‌ನಂಥ ವಿದೇಶಿ ನಗರಗಳಲ್ಲಿ ವಾಸಿಸುವ ಲೇಖಕರು ಮಾತ್ರ ಶ್ರೇಷ್ಠರು, ಭಾರತದಲ್ಲಿರುವವರು ಸಾಮಾನ್ಯರು ಎಂಬ ಭ್ರಮೆಯನ್ನು ಬೆಳೆಸಿಕೊಂಡಿದ್ದು, ಇದು ಅವರ ವಸಾಹತುಶಾಹಿ ಕೀಳರಿಮೆಯನ್ನು ಪ್ರದರ್ಶಿಸುತ್ತದೆ~ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ. `ಉತ್ಸವದಲ್ಲಿ ಸ್ವದೇಶಿ ಸಾಹಿತಿಗಳಾದ ಕಬೀರ್, ಪ್ರೇಮ್‌ಚಂದ್, ಶರತ್‌ಚಂದ್ರ, ಮಾಂಟೊ, ಘಾಲಿಬ್, ಫಯಾಜ್ ಮುಂತಾದವರ ಸಾಹಿತ್ಯ ಕೃತಿಗಳನ್ನು ಚರ್ಚಿಸಬಹುದಾಗಿತ್ತು. ಜತೆಗೆ ಡಿಕನ್ಸ್, ಶಾ, ಹ್ಯೂಗೊ, ಟಾಲ್‌ಸ್ಟಾಯ್ ಮುಂತಾದವರ ಕೃತಿಗಳನ್ನೂ ಉತ್ಸವದಲ್ಲಿ ಸೇರಿಸಬಹುದಾಗಿತ್ತು. ಕಬೀರ್ ಮತ್ತು ತುಳಸೀದಾಸ್ ಅವರು ಬನಾರಸ್‌ನ ಬೆಟ್ಟಗ ಳಲ್ಲಿ ನೆಲೆಸಿದ್ದರಿಂದ ಅವರೆಂದೂ ನಮಗೆ ಶ್ರೇಷ್ಠರು ಎಂದೆನಿಸುವುದಿಲ್ಲ. ಬದಲಾಗಿ ಥೇಮ್ಸ ನದಿಯ ದಂಡೆಯ ಮೇಲಿರುವವರೇ ಹಿರಿಯ ಸಾಹಿತಿಗಳು ಎನಿಸಿಕೊಳ್ಳುತ್ತಾರೆ~ ಎಂದು ಖಟ್ಜು ಖಾರವಾಗಿ ಹೇಳಿದ್ದಾರೆ.

`ಜೈಪುರ ಸಾಹಿತ್ಯ ಉತ್ಸವದಲ್ಲಿ ರಶ್ದಿ ಅವರೇ ಕೇಂದ್ರಬಿಂದುವಾಗಿದ್ದರು. ಅವರಿಗೆ ನಿಷೇಧ ಹೇರಿದ್ದು ಸರಿಯೇ, ತಪ್ಪೇ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ವಿವಾದದಲ್ಲಿ ಸಿಲುಕಿಕೊಳ್ಳಲು ನಾನು ಬಯಸುವುದಿಲ್ಲ. ಆದರೆ ನಾನು ಕೇವಲ ಮೂಲಭೂತ ಪ್ರಶ್ನೆಯನ್ನು ಮಾತ್ರ ಕೇಳಲು ಬಯಸುತ್ತೇನೆ. ಗೊಡ್ಡು ಸಂಪ್ರದಾಯ ವಿರೋಧಿಗಳ ಪರವಾಗಿ ಎಂದಿಗೂ ನಿಲ್ಲಲಾರೆ. ಇದೇ ವೇಳೆ, ಕೀಳು ದರ್ಜೆಯ ಸಾಹಿತಿಯೊಬ್ಬರನ್ನು ನಾಯಕನ ಸ್ಥಾನಕ್ಕೆ ಎಂದೂ ಏರಿಸಲಾರೆ~ ಎಂದು ಅವರು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.