ADVERTISEMENT

ರಸ್ತೆ ಸಮಸ್ಯೆಗೆ ಪಿಎಂಜಿಎಸ್‌ವೈ ಪರಿಹಾರವಲ್ಲ: ಜೈರಾಂ ರಮೇಶ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2012, 19:30 IST
Last Updated 8 ಏಪ್ರಿಲ್ 2012, 19:30 IST

ಮುಂಬೈ (ಪಿಟಿಐ): `ಹಳ್ಳಿಗಳ ರಸ್ತೆ ಸಮಸ್ಯೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಶಾಶ್ವತ ಪರಿಹಾರವಲ್ಲ~ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಹೇಳಿದರು.

ಭಾನುವಾರ ಇಲ್ಲಿ ನಡೆದ `ಎಂಜೆಂಡೆರಿಂಗ್ ಫಿಸಿಕಲ್ ಇನ್‌ಫ್ರಾಸ್ಟ್ರಕ್ಚರ್ ವಯಾ ಪಿಎಂಜಿಎಸ್‌ವೈ~ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ.

ಕೇಂದ್ರ ಸರ್ಕಾರ ಕೇವಲ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಗೆ ಹಣ ವ್ಯಯ ಮಾಡುತ್ತಿದ್ದರೆ, ಹಳ್ಳಿಗಳಲ್ಲಿ ಇತರೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಹಣದ ಕೊರತೆ ಉಂಟಾಗುತ್ತದೆ ಎಂದು ಅವರು ವಿವರಿಸಿದರು. `ಕೇಂದ್ರ ಸರ್ಕಾರದ ಯೋಜನೆಗಳು ರಾಷ್ಟ್ರಮಟ್ಟದಲ್ಲಿ ರೂಪಗೊಳ್ಳುವುದರಿಂದ ಸ್ಥಳೀಯ ಅವಶ್ಯಕತೆಗೆ ತಕ್ಕಂತೆ ಅವುಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನಾ ನಿಗ್ರಹಕ್ಕೆ ಸಂಬಂಧಿಸಿದಂತೆ ಉದ್ದೇಶಿತ ಎನ್‌ಸಿಟಿಸಿ ಯೋಜನೆಯನ್ನು ವಿರೋಧಿಸುತ್ತಿರುವ ರಾಜ್ಯ ಸರ್ಕಾರಗಳ ನಡೆಯನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, `ಒಂದೆಡೆ ರಾಜ್ಯ ಸರ್ಕಾರಗಳು ಪಿಎಂಜಿಎಸ್‌ವೈ ಯೋಜನೆಯಡಿ ನಿರ್ಮಿತ ರಸ್ತೆಗಳ ದುರಸ್ತಿಗಾಗಿ ಕೇಂದ್ರದಿಂದ ಹಣ ಕೇಳುತ್ತವೆ. ಇನ್ನೊಂದೆಡೆ ಗಣತಂತ್ರ ವ್ಯವಸ್ಥೆ ಬಗ್ಗೆ ಅಪಸ್ವರ ಎತ್ತುತ್ತವೆ~ ಎಂದು ವ್ಯಂಗ್ಯವಾಡಿದರು.

ಸಚಿವರ ಶ್ಲಾಘನೆ
:  `500 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದು ಪಿಎಂಜಿಎಸ್‌ವೈ ಯೋಜನೆ ಉದ್ದೇಶ. ಪ್ರಸ್ತುತ ಮಧ್ಯಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 500ಕ್ಕೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳಿಗೆ ರಸ್ತೆ ನಿರ್ಮಿಸುವಂತಹ ಯೋಜನೆ ರೂಪಿಸುತ್ತಿರುವುದು ಸ್ವಾಗತಾರ್ಹ ಸಂಗತಿ~ ಎಂದು ರಮೇಶ್ ಶ್ಲಾಘಿಸಿದರು.

ಹಣ ಬಿಡುಗಡೆ : `ಗ್ರಾಮೀಣ ಅಭಿವೃದ್ಧಿಗಾಗಿ ಶೇ 50ರಷ್ಟು ಹಣವನ್ನು `12ನೇ ಪಂಚ ವಾರ್ಷಿಕ ಯೋಜನೆಯ ಕೊನೆಯಲ್ಲಿ ಆಯಾ ರಾಜ್ಯ ಸರ್ಕಾರಗಳಿಗೆ ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದರು. ರಾಜ್ಯ ಸರ್ಕಾರಗಳು ಆದ್ಯತೆ ಮೇರೆಗೆ ಹಣವನ್ನು ಖರ್ಚು ಮಾಡಬಹುದು~ ಎಂದು ಸಲಹೆ ನೀಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.