ನವದೆಹಲಿ/ಸೂರತ್ (ಪಿಟಿಐ): ತನ್ನನ್ನು ಮುಳುಗುತ್ತಿರುವ ಹಡಗಿಗೆ ಹೋಲಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ತಿರುಗಿ ಬಿದ್ದಿರುವ ಕಾಂಗ್ರೆಸ್, ಮೋದಿ ಅವರನ್ನು `ರಾಜಕೀಯ ಭಯೋತ್ಪಾದಕ~ ಎಂದು ಜರಿದಿದೆ.
ಪಕ್ಷದ ವಿರುದ್ಧ ಅನಾಗರಿಕವಾಗಿ ಆರೋಪ ನಡೆಸುವ ಮೂಲಕ ನರೇಂದ್ರ ಮೋದಿ ಅವರು ಚುನಾವಣೆ ನಡೆಯಲಿರುವ ರಾಜ್ಯದ ವಾಸ್ತವ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ ಎಂದೂ ಆರೋಪಿಸಿದೆ.
`ರಾಜಕೀಯದಲ್ಲಿ ಮೋದಿ ಒಬ್ಬ ಭಯೋತ್ಪಾದಕ~ ಎಂದು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ಅಧ್ಯಕ್ಷ ಅರ್ಜುನ್ ಮೊಧ್ವಾಡಿಯಾ ಅವರೂ ಸೂರತ್‌ನಲ್ಲಿ ಹೇಳಿದ್ದಾರೆ.
ರಾಜ್‌ಕೋಟ್‌ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ಟೀಕಿಸಿ ಮಾಡಿರುವ ಭಾಷಣಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿ ಭಾಷಣಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, `ಸಡಿಲಗೊಂಡಿರುವ ಮೊಳೆಗಳಿಂದಾಗಿ ಬಿಜೆಪಿಯು ಈಗಾಗಲೇ ಮುಳುಗಿದ ದೋಣಿಯಂತಾಗಿದೆ~ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದನ್ನು ಬಿಟ್ಟು ಬಿಜೆಪಿಯು ಗುಜರಾತ್‌ನಲ್ಲಿ ಆಡಳಿತದ ವಿಚಾರದ ಕುರಿತಾಗಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಬೇಕು ಎಂದು ಅವರು ಪ್ರತಿ ವಾಗ್ದಾಳಿ ನಡೆಸಿದ್ದಾರೆ.
ಸಂಜಯ್ ಜೋಷಿ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಜಿಪಿಸಿಸಿ ಅಧ್ಯಕ್ಷ ಮೊಧ್ವಾಡಿಯಾ, ಗುಜರಾತ್‌ನ ಮುಖ್ಯಮಂತ್ರಿಗಳು ತಮ್ಮ `ಕಡು ವೈರಿ~ ಬಗ್ಗೆ ಭಯ ಹೊಂದಿದ್ದರು. ಹೀಗಾಗಿ ವರಿಷ್ಠರ ಮೇಲೆ ತೀವ್ರ ಒತ್ತಡ ಹಾಕಿ ಅವರು ಪಕ್ಷ ತೊರೆಯುವಂತೆ ಮಾಡಿದರು ಎಂದಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಯುಪಿಎ ವಿರುದ್ಧ ಹರಿಹಾಯ್ದಿದ್ದ ಮೋದಿ, `ಹಡಗಿನಲ್ಲಿ ರಂಧ್ರ ಇದೆ ಎಂಬ ವಿಚಾರ ಕಾಂಗ್ರೆಸ್‌ಗೆ ತಿಳಿದಿಲ್ಲ~ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.