ADVERTISEMENT

ರಾಜಧಾನಿಯಲ್ಲಿ ಕಾಮುಕರ ವಿರುದ್ಧ ಕಾವೇರಿದ ಪ್ರತಿಭಟನೆಗಳು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2012, 10:01 IST
Last Updated 31 ಡಿಸೆಂಬರ್ 2012, 10:01 IST
ಸೋಮವಾರ ದೆಹಲಿಯಲ್ಲಿ ಕಂಡು ಬಂದ ಪ್ರತಿಭಟನೆಯ ದೃಶ್ಯ. -ಎಪಿ ಚಿತ್ರ.
ಸೋಮವಾರ ದೆಹಲಿಯಲ್ಲಿ ಕಂಡು ಬಂದ ಪ್ರತಿಭಟನೆಯ ದೃಶ್ಯ. -ಎಪಿ ಚಿತ್ರ.   

ನವದೆಹಲಿ (ಐಎಎನ್‌ಎಸ್): ವಿಕೃತ ಕಾಮಾಂಧರ ಅಟ್ಟಹಾಸಕ್ಕೆ ನಲುಗಿ ಜೀವತೆತ್ತ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಅಂತ್ಯಕ್ರೀಯೆಯ ಬೆನ್ನಲ್ಲೇ ರಾಜಧಾನಿಯಾದ್ಯಂತ ಪ್ರತಿಭಟನೆಗಳು ಕಾವು ಪಡೆದುಕೊಂಡಿದ್ದು, ಸೋಮವಾರ ಕೂಡ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಬೀದಿಗಿಳಿದು ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಂತರ್ ಮಂತರ್ ಬಳಿ ಯುವಜನರಿಂದಲೇ ಕೂಡಿದ ಬಹುದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ಪ್ರತಿಭಟನಾಕಾರರು ಅತ್ಯಾಚಾರ ಹಾಗೂ ಇತರೆ ಅಪರಾಧಗಳಿಗೆ ಸಂಬಂಧಿಸಿದಂತೆ ಸರ್ಕಾರ ಕಠಿಣ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳದಲ್ಲಿಯೇ ಇಬ್ಬರು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದು, ಅವರಲ್ಲಿ ಒಬ್ಬರಾದ ಬಾಬುಸಿಂಗ್ ರಾಮ್ ಅವರು `ನಾನು ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತಗತಿಯ ವಿಚಾರಣಾ ನ್ಯಾಯಾಲಯಗಳನ್ನು ಪ್ರಾರಂಭಿಸುವವರೆಗೆ ನಾನು ಉಪವಾಸ ಮುಂದುವರಿಸುತ್ತೇನೆ' ಎಂದು ತಿಳಿಸಿದರು.

ಇದೇ ವೇಳೆ ಅಖಿಲ ಭಾರತೀಯ ವಿದ್ಯಾರ್ಥಿ ಸಂಘಟನೆ (ಎಐಎಸ್‌ಎ) ವಿದ್ಯಾರ್ಥಿಗಳು ಸೇರಿದಂತೆ  ಕಮ್ಯೂನಿಷ್ಟ್ ಪಕ್ಷದ ಸಾವಿರಾರು ಕಾರ್ಯಕರ್ತರು ಕನ್ನಾಟ್ ಪ್ಲೆಸ್ ಬಳಿ ಪ್ರತಿಭಟನೆ ನಡೆಸಿದರು.

ಸೋಮವಾರ ಹೊಸ ವರ್ಷದ ಮುನ್ನಾದಿನವಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಕನ್ನಾಟ್ ಪ್ಲೆಸ್ ಸುತ್ತಮುತ್ತ ಸಂಜೆ 7ಗಂಟೆಯಿಂದ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು, ಇದೇ ಸಮಯಕ್ಕೆ ದೆಹಲಿ ಮೆಟ್ರೊ ರಾಜೀವ್ ಚೌಕ್, ಬಾರಾಕಂಬ್ ರಸ್ತೆ ಹಾಗೂ ಪಟೇಲ್ ಚೌಕ್‌ನ ಮೆಟ್ರೊ ನಿಲ್ದಾಣಗಳ ಸಂಚಾರವನ್ನು ಬಂದ್ ಮಾಡಲು ನಿರ್ಧರಿಸಿದೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಈ ಮೂರು ನಿಲ್ದಾಣಗಳಿಗೆ ಪ್ರಯಾಣಿಕರ ಪ್ರವೇಶವನ್ನು ಸಂಜೆ 7 ಗಂಟೆಯಿಂದ ಬಂದ್ ಮಾಡಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.