ನವದೆಹಲಿ (ಐಎಎನ್‌ಎಸ್): ಐಪಿಎಲ್ ಹಗರಣದ ಪ್ರಮುಖ ಆರೋಪಿ ಲಲಿತ್‌ಮೋದಿ ಅವರಿಗೆ ವೀಸಾ ಪಡೆಯಲು ನೆರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರು ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಬೇಟಿ ಮಾಡಿರುವ ಸುಷ್ಮಾ ಸ್ವರಾಜ್ ಘಟನೆಗೆ ಕುರಿತಂತೆ ಮಾಹಿತಿ ನೀಡಿದ್ದಾರೆ. ಮಾನವೀಯ ನೆಲೆಗಟ್ಟಿನಲ್ಲಿ ಮೋದಿ ಅವರಿಗೆ ಸಹಾಯ ಮಾಡಿರುವುದಾಗಿ ಸುಷ್ಮಾ ತಿಳಿಸಿದ್ದಾರೆ. ಈಗಾಗಲೇ ಎನ್‌ಡಿಎ ಮತ್ತು ಶಿವಸೇನೆ ಸುಷ್ಮಾ ಅವರಿಗೆ ಬೆಂಬಲ ವ್ಯಕ್ತಪಡಿಸಿವೆ.
'ನಾನು ತಪ್ಪು ಮಾಡಿಲ್ಲ, ಮಾನವೀಯ ದೃಷ್ಟಿಯಿಂದ ಸಹಾಯ ಮಾಡಿದ್ದೇನೆ. ಆದರೆ, ನನ್ನಿಂದಾಗಿ ಸರ್ಕಾರಕ್ಕೆ ಮುಜುಗರ ಉಂಟಾಗಬಾರದು. ನಾನು ರಾಜೀನಾಮೆ ನೀಡುತ್ತೇನೆ' ಎಂದು ಸುಷ್ಮಾ ಆರ್‌ಎಸ್‌ಎಸ್ ನಾಯಕರ ಬಳಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಆರ್‌ಎಸ್‌ಎಸ್ ನಾಯಕರು ನೀವು ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.