ADVERTISEMENT

ರಾಜ್ಯದ ಇಬ್ಬರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ನವದೆಹಲಿ: ಆತ ಮಲೆನಾಡಿನ ಹುಡುಗ. ಎಸ್‌ಎಸ್‌ಎಲ್‌ಸಿ ವಿದ್ಯಾ ರ್ಥಿಯಾದ ಅವನಿಗೆ ಮಾತು ಬರುವುದಿಲ್ಲ. ಕಿವಿ ಕೇಳುವುದಿಲ್ಲ. ಆದರೆ, ಆತನ ಸಾಹಸಕ್ಕೆ ಇದ್ಯಾವುದೂ ಅಡ್ಡಿಯಾಗಲಿಲ್ಲ. ಸ್ನಾನಕ್ಕೆ  ನದಿಗೆ ಇಳಿದಿದ್ದ 11 ವರ್ಷದ ಬಾಲಕಿಯೊಬ್ಬಳು ನೀರಿನಲ್ಲಿ ಮುಳುಗುತ್ತಿದ್ದಾಗ ಎಲ್ಲರೂ ಅಸಹಾಯಕರಾಗಿ ನೋಡುತ್ತಿದ್ದರು.
 
ಕೊಂಚ ದೂರದಲ್ಲಿ ಈಜಾಡುತ್ತಿದ್ದ ಈ ಮೂಕ ಬಾಲಕ ತಡಮಾಡದೆ ಮುನ್ನುಗ್ಗಿ ಆಕೆಯನ್ನು ರಕ್ಷಿಸಿ ಸಾಹಸ ಮೆರೆದ. ತಾನು ಅಂಗವಿಕಲನಾಗಿದ್ದರೂ ಒಳಮನಸು ಊನವಾಗಿಲ್ಲ ಎಂದು ಸಾರಿ ಹೇಳಿದ.

ಇದು ನಡೆದಿದ್ದು 2010ರ ಮೇ 26ರಂದು ಉತ್ತರ ಕನ್ನಡ ಜಿಲ್ಲೆಯ ಹೆಗ್ಗಾರು ಗ್ರಾಮದಲ್ಲಿ. ಶಿವಮೊಗ್ಗದ ಮದರ್ ಥೆರೆಸಾ ಅಂಗವಿಕಲರ ಶಾಲೆಯಲ್ಲಿ ಕಲಿಯುತ್ತಿರುವ ಸಂದೇಶ ಹೆಗಡೆ ಕಾರ್ಯಕ್ರಮವೊಂದರ ನಿಮಿತ್ತ ಬಂಧುಗಳ ಮನೆಗೆ ಹೋಗಿದ್ದ. ಮನೆಮಂದಿ ಎಲ್ಲ ಕೂಡಿಕೊಂಡು ಸ್ನಾನಕ್ಕೆ ನದಿಗೆ ಹೋಗಿದ್ದರು. ಇವರಲ್ಲಿ 12 ವರ್ಷದ ಬಾಲಕಿಯರಿಬ್ಬರು ಸೇರಿದ್ದರು. ರಶ್ಮಿ ಎಂಬ ಬಾಲಕಿ ನೀರಿನಲ್ಲಿ ಮುಳುಗಿದಳು.

ಎಲ್ಲರೂ ಪ್ರಯತ್ನ ಮಾಡಿದರು ಆಕೆಯನ್ನು ಪಾರು ಮಾಡಲು ಸಾಧ್ಯವಾಗಲಿಲ್ಲ. ಸ್ವಲ್ಪ ದೂರದಲ್ಲಿ ಸಂದೇಶ ಈಜಾಡುತ್ತಿದ್ದ. ಅವನ ನೆರವಿಗಾಗಿ ಕೂಗಿಕೊಳ್ಳಲಾಯಿತು. ಕಿವಿ ಕೇಳದ ಆತನ ಗಮನ ಸೆಳೆಯಲು ಕಲ್ಲು ಎಸೆಯಲಾಯಿತು. ತಕ್ಷಣ ಮನೆಯವರತ್ತ ನೋಡಿದ ಅವನಿಗೆ ಕೈ ಸನ್ನೆ ಮಾಡಿ ರಶ್ಮಿ ಮುಳುಗಿರುವ ಸಂಗತಿ ಹೇಳಲಾಯಿತು.

ಕ್ಷಣಮಾತ್ರದಲ್ಲಿ ವಿಷಯದ ಗಂಭೀರತೆ ಅರಿತ ಸಂದೇಶ ಬಾಲಕಿ ಮುಳುಗುತ್ತಿರುವ ಕಡೆ ಧಾವಿಸಿದ. ಕೆಲ ನಿಮಿಷದಲ್ಲಿ ಬಾಲಕಿ ಜುಟ್ಟು ಹಿಡಿದೆಳೆದು ಹತ್ತಿರದ ಬಂಡೆಗೆ ತಂದ. ಆಗಾಗಲೇ ಬಾಲಕಿ ಮುಳುಗಿ ಏಳುನಿಮಿಷಗಳಾಗಿದ್ದವು. ಆ ವೇಳೆಗೆ ಬಾಲಕಿ ನೀರು ಕುಡಿದು ಪ್ರಜ್ಞೆ ಕಳೆದುಕೊಂಡಿದ್ದಳು.

ಸಂದೇಶ ಧೃತಿಗೆಡಲಿಲ್ಲ. ಹುಡುಗಿ ಮೈಯನ್ನು ಚೆನ್ನಾಗಿ ಉಜ್ಜಿ ಕುಡಿದಿದ್ದ ನೀರು ಹೊರ ತೆಗೆದ .ಸ್ವಲ್ಪ ಹೊತ್ತಿಗೆ ಆಕೆ ಕಣ್ಣು ಬಿಟ್ಟಳು. ನದಿಯಲ್ಲಿ ಮುಳುಗಿದ್ದ ಹುಡುಗಿಗೆ ಮರುಜನ್ಮ ನೀಡಿದ ಅಂಗವಿಕಲ ಬಾಲಕ ಮನೆಯವರ ಕಣ್ಣೀರು ತೊಳೆದು, ಮುಗುಳ್ನಗೆ ಚೆಲ್ಲುವಂತೆ ಮಾಡಿದ. 
 
  `ಹುಡುಗಿ ಹೊಟ್ಟೆಯಿಂದ ನೀರು ತೆಗೆಯಲು ಗೊತ್ತಾದದ್ದು ಹೇಗೆ?~ ಎಂಬ ಮನೆಯವರ ಪ್ರಶ್ನೆಗೆ, `ಟಿವಿಯಲ್ಲಿ ನೋಡಿದ್ದೆ~ ಎಂದು ಉತ್ತರಿಸಿದ. ತಾಯಿ ಸರಸ್ವತಿ ಹೆಗಡೆ, ಚಿಕ್ಕಮ್ಮ  ಶ್ರೀ ಶೈಲಾಹೆಗಡೆ, ತಂದೆ ಪರಮೇಶ್ವರ ಹೆಗಡೆ ಸೇರಿದಂತೆ ಎಲ್ಲರ ಕಣ್ಣುಗಳು ಒಂದು ಕ್ಷಣ ಒದ್ದೆಯಾದವು.

(ಸಂದೇಶನ ಈ ಸಾಹಸಗಾಥೆ ಮೊದಲಿಗೆ ಪ್ರಜಾವಾಣಿಯಲ್ಲಿ ಜುಲೈ 6,2010 ರಂದು ಪ್ರಕಟವಾಗಿತ್ತು)
 ಕೃಷಿ ಕಾರ್ಮಿಕ ಪರಮೇಶ್ವರ ಹೆಗಡೆ ಅವರ ಮಗನಾದ ಸಂದೇಶ ಹೆಗಡೆ 25ರಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಂದ ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾನೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕೃತ ಇತರ ಮಕ್ಕಳೊಂದಿಗೆ ಆನೆ ಮೇಲೆ ಕೂತು ಮೆರವಣಿಗೆ ಮಾಡಿಸಿಕೊಳ್ಳಲಿದ್ದಾನೆ. ಇವನೊಟ್ಟಿಗೆ ಪ್ರಶಸ್ತಿ ಸ್ವೀಕರಿಸುವ ಮಕ್ಕಳಲ್ಲಿ ಬೆಂಗಳೂರಿನ ಬಿ.ಎ.ಸಿಂಧುಶ್ರೀ ಕೂಡಾ ಇದ್ದಾಳೆ.

 ದಾಸರಹಳ್ಳಿಯ ಸೇಂಟ್ ಮೇರಿಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಸಿಂಧು ಶ್ರೀಯದು ಮತ್ತೊಂದು ಬಗೆಯ ಸಾಹಸ. 2010ರ ಮೇ 20ರಂದು ತಾಯಿ ಸರೋಜ ಅವರ ಜತೆ ಸಿಟಿ ಬಸ್‌ನಲ್ಲಿ ಯಶವಂತಪುರದ ಬಳಿ ಪ್ರಯಾಣಿಸುತ್ತಿದ್ದಾಗ ಮಹಿಳೆಯೊಬ್ಬಳು ಪಕ್ಕದಲ್ಲಿ ಬಂದು ನಿಂತಳು. ಈಕೆ ಅಮ್ಮನ ಕೈಯಲ್ಲಿದ್ದ ಬ್ಯಾಗಿನಿಂದ ಪರ್ಸ್ ಅಪಹರಿಸಿದ್ದನ್ನು ಬಾಲಕಿ ನೋಡಿ  ಜಾಗೃತಳಾದಳು. ಅಷ್ಟರಲ್ಲಿ ಕಿಸೆಗಳ್ಳಿ ಆ ಬಸ್ಸಿನಿಂದ ಇಳಿದು ಮತ್ತೊಂದು ಬಸ್ ಹತ್ತಿದ್ದಳು.

ಛಲ ಬಿಡದ ಬಾಲಕಿ ಆಕೆಯನ್ನು  ಹಿಂಬಾಲಿಸುತ್ತಿದ್ದಂತೆ ಬಸ್ ಹೊರಟಿತು. ಎದೆಗುಂದದೆ ಬಸ್ಸಿಗೆ ಅಡ್ಡಗಟ್ಟಿ ಚಾಲಕನಿಂದ ಬೈಸಿಕೊಂಡಳು. ಬಸ್ ನಿಲ್ಲುತ್ತಿದ್ದಂತೆ ಕಿಸೆಗಳ್ಳಿಯನ್ನು ಪತ್ತೆ ಹಚ್ಚಿ ಅಪಹರಣ ಮಾಡಿದ ಪರ್ಸ್ ಹಿಂತಿರುಗಿಸುವಂತೆ ಹಟ ಮಾಡಿ ಆಕೆಯಿಂದ ಏಟು ತಿಂದಳು. ಉಳಿದ ಪ್ರಯಾಣಿಕರು ಬಾಲಕಿ ನೆರವಿಗೆ ಬಂದರು. ಕಿಸೆಗಳ್ಳಿಯನ್ನು ಶೋಧನೆಗೆ ಒಳಪಡಿಸಿದಾಗ ಸರೋಜ ಅವರ ಪರ್ಸ್ ಜತೆಗೆ ಒಟ್ಟು 32 ಪರ್ಸ್‌ಗಳು ಸಿಕ್ಕಿವು. ಆಕೆ ಪೊಲೀಸರ `ಅತಿಥಿ~ಯಾದಳು.
 
ಬಾಲಕಿ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಸರೋಜ ಅವರ ತಂದೆ ಆನಂದ ರಾಂ ಪ್ರಜಾವಾಣಿಗೆ ವಿವರಿಸಿದರು. ಸಂದೇಶ್ ಹೆಗಡೆ ಸಾಹಸವನ್ನು ಆತನ ತಾಯಿ ಸರಸ್ವತಿ ಹೆಗಡೆ ಬಣ್ಣಿಸಿದರು. ಒಟ್ಟು 24 ಮಕ್ಕಳಿಗೆ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಡುವ ಈ ಪ್ರಶಸ್ತಿ ಐವರಿಗೆ ಮರಣೋತ್ತರವಾಗಿ ಕೊಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.