ADVERTISEMENT

ರಾಜ್ಯಪಾಲರ ಕ್ರಮ ಕಾನೂನು ಬದ್ಧ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ನವದೆಹಲಿ: ಭೂ ಹಗರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ  ಬಿ. ಎಸ್. ಯಡಿಯೂರಪ್ಪ ಅವರ ಮೇಲೆ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ನೀಡಿರುವುದು ಕಾನೂನುಬದ್ಧವಾಗಿದ್ದು, ಬಿಜೆಪಿ ಅನಗತ್ಯವಾಗಿ ಎಚ್.ಆರ್. ಭಾರದ್ವಾಜ್ ವಿರುದ್ಧ ‘ದಾಳಿ’ ನಡೆಸುತ್ತಿದೆ ಎಂದು ಗೃಹ ಸಚಿವ ಪಿ. ಚಿದಂಬರಂ       ಹೇಳಿದ್ದಾರೆ.

ರಾಜ್ಯಪಾಲರ ನಿರ್ಧಾರ ಪ್ರಶ್ನಿಸಲು ಬೀದಿಗಿಳಿದಿರುವುದು ಸರಿಯಾದ ಕ್ರಮವಲ್ಲ. ಕರ್ನಾಟಕ ಸರ್ಕಾರ ಮತ್ತು ಬಿಜೆಪಿ ಕಾನೂನು- ಸುವ್ಯವಸ್ಥೆ ಕಾಪಾಡಬೇಕು ಎಂದು ಚಿದಂಬರಂ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಅಥವಾ ಮಂತ್ರಿ ಮೇಲೆ ಮೊಕದ್ದಮೆ ಹೂಡಲು ರಾಜ್ಯಪಾಲರು ಅನುಮತಿ ನೀಡುತ್ತಿರುವುದು ಇದೇ ಮೊದಲಲ್ಲ. ಇಂಥ ಕೆಲವು ನಿದರ್ಶನಗಳಿವೆ. ಈ ವಿಷಯದಲ್ಲಿ ಕಾನೂನು ಸ್ಪಷ್ಟವಾಗಿದೆ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡು ಹಿಂಸೆಗಿಳಿದಿದ್ದರೂ ನೋಡಿಕೊಂಡು ಸರ್ಕಾರ ಸುಮ್ಮನೆ ಕೂರಬಾರದು. ಕಾನೂನು- ಸುವ್ಯವಸ್ಥೆ ಕಾಪಾಡಲು ಮುಂದಾಗಬೇಕು ಎಂದು ಸಲಹೆ ಮಾಡಿದ್ದಾರೆ.

ಬಿಜೆಪಿಗೆ ಕಾನೂನಿನ ಅರಿವಿದೆ. ರಾಜ್ಯಪಾಲರ ತೀರ್ಮಾನವನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದೆಂಬ ತಿಳಿವಳಿಕೆಯೂ ಇದೆ.  ಪಕ್ಷದ ಕಾರ್ಯಕರ್ತರಿಗೆ ಕಾನೂನು ಮೀರಿ  ವರ್ತಿಸದಂತೆ ಮತ್ತು ಕಾನೂನು- ಸುವ್ಯವಸ್ಥೆ ಕಾಪಾಡುವ ಮೂಲಕ ಸಂವಿಧಾನಾತ್ಮಕ ಹೊಣೆಗಾರಿಕೆ  ನಿರ್ವಹಿಸುವಂತೆ ಸಲಹೆ ಮಾಡಲಿದೆ ಎಂದು ಆಶಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯ ಕರ್ನಾಟಕದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದರೆ,   ರಾಜ್ಯಪಾಲರು ಮೊಕದ್ದಮೆ ಹೂಡಲು ಒಪ್ಪಿಗೆ ನೀಡಿರುವ ದೂರಿನ ಅರ್ಹತೆ ಕುರಿತು ವಿವರಕ್ಕೆ ಹೋಗಲಾರೆ  ಎಂದು ಸ್ಪಷ್ಟಪಡಿಸಿದ್ದಾರೆ. ಮಧ್ಯಪ್ರದೇಶದ ಇಬ್ಬರು ಸಚಿವರ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಎತ್ತಿ ಹಿಡಿದಿರುವುದನ್ನು ಗೃಹ ಸಚಿವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.