ADVERTISEMENT

ರಾಜ್ಯಸಭೆ: 50 ಸದಸ್ಯರ ಪ್ರಮಾಣ ವಚನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಅರುಣ್ ಜೇಟ್ಲಿ, ಬಿಎಸ್‌ಪಿ ಮುಖ್ಯಸ್ಥೆ  ಮಾಯಾವತಿ, ಕೇಂದ್ರ ಸಚಿವರಾದ ವಿಲಾಸ್‌ರಾವ್ ದೇಶ್‌ಮುಖ್ ಮತ್ತು ರಾಜೀವ್ ಶುಕ್ಲಾ  ಹಾಗೂ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಸೇರಿದಂತೆ ಒಟ್ಟು 50 ಹೊಸ ಸದಸ್ಯರು ಮಂಗಳವಾರ ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಗುಜರಾತ್‌ನಿಂದ ಮೇಲ್ಮನೆಗೆ ಮರು ಆಯ್ಕೆಯಾದ ಅರುಣ್ ಜೇಟ್ಲಿ ಅವರು ಮೊದಲಿಗರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜೇಟ್ಲಿ ಅವರನ್ನು ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ಅಭಿನಂದಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ನಂತರ ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಿಂದಿಯಲ್ಲಿ ಪ್ರಮಾಣ ಸ್ವೀಕರಿಸಿದರು. ಮಹಾರಾಷ್ಟ್ರದಿಂದ ಆಯ್ಕೆಯಾದ  ಕೇಂದ್ರ ಸಚಿವರಾದ ವಿಲಾಸ್ ರಾವ್ ದೇಶ್‌ಮುಖ್ ಮರಾಠಿಯಲ್ಲಿ ಮತ್ತು ರಾಜೀವ್ ಶುಕ್ಲಾ ಹಿಂದಿಯಲ್ಲಿ ಪ್ರಮಾಣ ಮಾಡಿದರು.

ಸತತ ನಾಲ್ಕನೇ ಬಾರಿ ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭೆಯ ಮಾಜಿ ಉಪಾಸಭಾಪತಿ ರೆಹಮಾನ್ ಖಾನ್ ಅವರು ದೇವರ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್‌ನಿಂದ ಆಯ್ಕೆಯಾದ ಮಾಜಿ ಕೇಂದ್ರ ಸಚಿವೆ ರೇಣುಕಾ ಚೌಧರಿ, ಸೂಪರ್ ಸ್ಟಾರ್ ಚಿರಂಜೀವಿ, ಬಿಹಾರದಿಂದ ಆಯ್ಕೆಯಾದ ಬಿಜೆಪಿ  ಪ್ರಧಾನ ಕಾರ್ಯದರ್ಶಿ ರವಿಶಂಕರ್ ಪ್ರಸಾದ್, ಮಧ್ಯಪ್ರದೇಶದಿಂದ ಬಿಜೆಪಿ ಟಿಕೆಟ್‌ನಿಂದ ಆಯ್ಕೆಯಾದ ನಜ್ಮಾ ಹೆಪ್ತುಲ್ಲಾ, ಸಮಾಜವಾದಿ ಪಕ್ಷದ ಜಯಾ ಬಚ್ಚನ್, ಪಶ್ಚಿಮ ಬಂಗಾಳದಿಂದ ಆಯ್ಕೆಯಾದ ಸಿಪಿಎಂ ಮುಖಂಡ ತಪನ್ ಕುಮಾರ್ ಸೆನ್ ಸೇರಿದಂತೆ ಒಟ್ಟು 50 ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.