ADVERTISEMENT

ರಾಜ್ಯ ಬಿಜೆಪಿ ಅಧ್ಯಕ್ಷತೆಗೆ ಡಿವಿಎಸ್ ಸ್ಪಷ್ಟ ನಕಾರ?

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 19:30 IST
Last Updated 8 ಜುಲೈ 2012, 19:30 IST

ನವದೆಹಲಿ: ಮುಖ್ಯಮಂತ್ರಿ ಸ್ಥಾನ ತ್ಯಜಿಸುತ್ತಿರುವ ಡಿ.ವಿ. ಸದಾನಂದಗೌಡರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ವರಿಷ್ಠರು ಒಲುವು ತೋರಿದ್ದಾರೆ.

ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಭಾನುವಾರ ಸದಾನಂದಗೌಡ ಅವರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವ ಇಂಗಿತ ವ್ಯಕ್ತಪಡಿಸಿದರು. ಆದರೆ, ಮುಖ್ಯಮಂತ್ರಿ ತಮಗೆ ಯಾವುದೇ ಸ್ಥಾನ ಬೇಡ ಎಂದು ವಿನಯವಾಗಿ ಹೇಳಿದ್ದಾರೆಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

`ಸದ್ಯಕ್ಕೆ ನನಗೆ ಯಾವುದೇ ಸ್ಥಾನಮಾನ ಬೇಡ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಈಗಿರುವ ಎಲ್ಲ ಗೊಂದಲಗಳು ಮುಗಿಯಲಿ. ಆಮೇಲೆ ನೋಡೋಣ~ ಎಂಬ ಮಾತು ಹೇಳಿ ಮುಖ್ಯಮಂತ್ರಿ ಸದಾನಂದಗೌಡ ಅವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಶೆಟ್ಟರ್ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲಾಗುತ್ತಿದೆ. ಸದಾನಂದಗೌಡರು ಅಧ್ಯಕ್ಷ ಸ್ಥಾನ ಒಪ್ಪಿಕೊಂಡರೆ ಈಶ್ವರಪ್ಪ ಅವರನ್ನು ಡಿಸಿಎಂ ಹುದ್ದೆಗೆ ಒಪ್ಪಿಸುವ ಆಲೋಚನೆ ವರಿಷ್ಠರಿಗಿದೆ.

ಅವರು ಅಧ್ಯಕ್ಷ ಸ್ಥಾನ ಒಲ್ಲೆ ಎಂದರೆ ಒಕ್ಕಲಿಗರನ್ನು ಸಮಾಧಾನಪಡಿಸಲು ಸಚಿವ ಅಶೋಕ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬಹುದು. ಆದರೆ, ಇದ್ಯಾವುದೂ ಅಂತಿಮಗೊಂಡಿಲ್ಲ ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.