ನವದೆಹಲಿ: 2011- 12ನೇ ಸಾಲಿಗೆ 38,070ಕೋಟಿ ಮೊತ್ತದ ರಾಜ್ಯದ ಯೋಜನಾ ಗಾತ್ರಕ್ಕೆ ಯೋಜನಾ ಆಯೋಗ ಮಂಗಳವಾರ ಅನುಮೋದನೆ ನೀಡಿದೆ.ಮುಖ್ಯಮಂತ್ರಿ ನೇತೃತ್ವದ ರಾಜ್ಯದ ನಿಯೋಗ ಯೋಜನಾ ಆಯೋಗ ಉಪಾಧ್ಯಕ್ಷ ಮೊಂಟೆಕ್‌ಸಿಂಗ್ ಆಹ್ಲುವಾಲಿಯಾ ಹಾಗೂ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ 38.070ಕೋಟಿ ಯೋಜನಾ ಗಾತ್ರಕ್ಕೆ ಒಪ್ಪಿಗೆ ದೊರೆಯಿತು ಎಂದು ಹಿರಿಯ ಸಚಿವ ಡಾ.ವಿ.ಎಸ್. ಆಚಾರ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದು ಕಳೆದ ವರ್ಷದ ಯೋಜನಾ ಗಾತ್ರಕ್ಕಿಂತ ಶೇ.23ರಷ್ಟು ಅಧಿಕ. ಕಳೆದ ವರ್ಷದ ಗಾತ್ರ 31,050 ಕೋಟಿ. ರಾಜ್ಯದ ಹಣಕಾಸು ನಿರ್ವಹಣೆ ಮತ್ತು ಸಂಪನ್ಮೂಲ ಸಂಗ್ರಹ ಕುರಿತು ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಜ್ಯ ಪ್ರತ್ಯೇಕ ಕೃಷಿ ಬಜೆಟ್ ಕುರಿತು ಶ್ಲಾಘಿಸಿತು. ಕೆರೆಗಳ ಅಭಿವೃದ್ಧಿ, ಉತ್ಪಾದನೆ ಆಧಾರಿತ ಯೋಜನೆ ಹಾಗೂ ವಿದ್ಯುತ್ ಸುಧಾರಣೆ ಕುರಿತು ಆಯೋಗ ಕೊಂಡಾಡಿತು ಎಂದು ಆಚಾರ್ಯ ವಿವರಿಸಿದರು.
ಶಿಶು ಮರಣ ಸಂಖ್ಯೆ ಇಳಿಮುಖ, ರೈಲ್ವೆ ಯೋಜನೆಗಳಿಗೆ ಶೇ.50 ಹೂಡಿಕೆ ಕುರಿತು ಆಯೋಗ ಮಾಹಿತಿ ಪಡೆಯಿತು. ಸೇವಾ ವಲಯಕ್ಕೆ ವಿಪುಲ ಅವಕಾಶಗಳಿದ್ದು ಆ ಕಡೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿತು. ಮಹಿಳಾ ಸಾಕ್ಷರತೆಗೆ ಒತ್ತು ಕೊಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಕೃಷಿ ಕ್ಷೇತ್ರದ ಪ್ರಗತಿ ಕಳೆದ ಹತ್ತು ವರ್ಷಗಳಲ್ಲಿ ಬರೀ ಎರಡರಷ್ಟಿದೆ. ಇದು ಈಗ ಶೇ.6ಕ್ಕೆ ಮುಟ್ಟಿದೆ. ಇದೇ ವೇಗ ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಆಯೋಗ ತಿಳಿಸಿತು ಎಂದು ಬೊಮ್ಮಾಯಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.