ADVERTISEMENT

ರಾಷ್ಟ್ರಪತಿ ಚುನಾವಣೆ: ಪಕ್ಷದ ಸಂಸದರನ್ನು ಭೇಟಿ ಮಾಡಿದ ಸೋನಿಯಾ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ನವದೆಹಲಿ (ಪಿಟಿಐ): ಗುರುವಾರ ನಡೆಯುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮ ಪಕ್ಷದ ಸಂಸದರೊಂದಿಗೆ ಮಂಗಳವಾರ ಸಂವಾದ ನಡೆಸಿದ್ದಾರೆ.

`ರಾಷ್ಟ್ರಪತಿ ಚುನಾವಣೆಯ ಪ್ರಕ್ರಿಯೆ ಮತ್ತು ಮತದಾನದ ವಿಧಾನ ಕುರಿತಂತೆ ಪಕ್ಷದ ಅಧ್ಯಕ್ಷರು ಸಂಸದರೊಂದಿಗೆ ಸಂವಾದ ನಡೆಸಿದರು. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲಿ ಇಂತಹ ಸಭೆಗಳು ಸಾಮಾನ್ಯವಾಗಿ ನಡೆಯುತ್ತವೆ~ ಎಂದು ಕೇಂದ್ರ ಸಚಿವ ಹರೀಶ್ ರಾವತ್ ಈ ಸಂವಾದದ ನಂತರ ಸುದ್ದಿಗಾರರಿಗೆ ತಿಳಿಸಿದರು.

`ಯುಪಿಎ ಮೈತ್ರಿಕೂಟದಲ್ಲಿ ಅಡ್ಡ ಮತದಾನ ನಡೆಯುವ ಯಾವುದೇ ಸಾಧ್ಯತೆ ಇಲ್ಲ, ನಮಲ್ಲಿ ಒಗ್ಗಟ್ಟಿದೆ. ಎದುರಾಳಿ ಮೈತ್ರಿಕೂಟದವರು ತಮ್ಮ ಪಾಳೆಯದಲ್ಲಿ ಇಂತಹ ಚಟುವಟಿಕೆ ಬಗ್ಗೆ ಗಮನಕೊಡಬೇಕು~ ಎಂದು ಅವರು ವ್ಯಂಗ್ಯವಾಡಿದರು.

 ಮತದಾರರು ತಮ್ಮ ಆತ್ಮಸಾಕ್ಷಿಯಂತೆ ಮತದಾನ ಮಾಡುತ್ತಾರೆಂದು ಎನ್‌ಡಿಎ ಅಭ್ಯರ್ಥಿಯಾದ ಪಿ.ಎ. ಸಂಗ್ಮಾ ವಿಶ್ವಾಸ ವ್ಯಕ್ತಪಡಿಸಿರುವ ಕುರಿತ ಪ್ರಶ್ನೆಗೆ, `ಎನ್‌ಡಿಎ ಅಂಗಪಕ್ಷಗಳಾದ ಜೆಡಿಯು ಮತ್ತು ಶಿವಸೇನೆ ಈಗಾಗಲೇ ಪ್ರಣವ್ ಮುಖರ್ಜಿ ಅವರಿಗೆ ಬೆಂಬಲ ಸೂಚಿಸಿವೆ. ಆದ್ದರಿಂದ ಅಡ್ಡ ಮತದಾನದ ಬಗ್ಗೆ ಎದುರಾಳಿ ಮೈತ್ರಿಕೂಟದವರು ಚಿಂತಿಸಬೇಕು~ ಎಂದರು.

ವಿವಿಧ ರಾಜ್ಯಗಳ ಕಾಂಗ್ರೆಸ್ ಸಂಸದರು ಆಯಾ ರಾಜ್ಯಗಳ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವವರೊಂದಿಗೆ ಪ್ರತ್ಯೇಕ ತಂಡದಲ್ಲಿ ಆಗಮಿಸಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದರು. ತಂತಮ್ಮ ರಾಜ್ಯಗಳ ಸಂಸದರ ತಂಡದೊಂದಿಗೆ ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಕೇಂದ್ರದ ಬಹುತೇಕ ಸಚಿವರೂ ಬಂದಿದ್ದರು.

ಪಕ್ಷದಲ್ಲಿ ರಾಹುಲ್ ಗಾಂಧಿ ಅವರಿಗೆ ಹೆಚ್ಚಿನ ಹೊಣೆ ವಹಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲೇ ಸೋನಿಯಾ ಗಾಂಧಿ ಅವರು ಸಂಸದರನ್ನು ಭೇಟಿ ಮಾಡಿದ್ದಾರೆ. ಇದು ರಾಹುಲ್ ಪಕ್ಷದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಾರೆ ಎಂಬ ಸೂಚನೆಯನ್ನೂ ನೀಡುತ್ತದೆ. ಆದಾಗ್ಯೂ, ಪಕ್ಷದ ಹಿರಿಯ ನಾಯಕರು ಇಂತಹದ್ದೇನು ಇಲ್ಲ. ಸೋನಿಯಾ ಅವರೂ ಇಂತಹ ವಿಚಾರವನ್ನು ಪ್ರಸ್ತಾಪಿಸಿಲ್ಲ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.