ನವದೆಹಲಿ (ಪಿಟಿಐ): ಮಿತ್ರ ಪಕ್ಷವಾದ ತೃಣಮೂಲ ಕಾಂಗ್ರೆಸ್, ಪಿಂಚಣಿ ಸುಧಾರಣಾ ಮಸೂದೆ ವಿರುದ್ಧ ದನಿ ಎತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಕುರಿತ ಚರ್ಚೆಯನ್ನು ಗುರುವಾರ ಸಚಿವ ಸಂಪುಟ ಸಭೆಯ ಕಾರ್ಯಸೂಚಿ ಪಟ್ಟಿಯಿಂದ ಕೈಬಿಟ್ಟು ಸುರಕ್ಷಿತ ಮಾರ್ಗೋಪಾಯ ಅನುಸರಿಸಿತು.
ಪೂರ್ವನಿಗದಿ ಪ್ರಕಾರ, ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಈ ಮಸೂದೆ ಚರ್ಚೆಗೆ ಬರಬೇಕಿತ್ತು. ಆದರೆ, ರಾಷ್ಟ್ರಪತಿ ಚುನಾವಣೆ ಹತ್ತಿರವಿರುವುದರಿಂದ ಮಿತ್ರಪಕ್ಷದ ವಿರೋಧ ಕಟ್ಟಿಕೊಂಡು ಮಸೂದೆಗೆ ಅಂಗೀಕಾರ ನೀಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.
ಪಿಂಚಣಿ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಹಾಗೂ ವಿದೇಶಿ ಹೂಡಿಕೆಗೆ ಅವಕಾಶ ಕಲ್ಪಿಸುವ ಈ ಮಸೂದೆ ಕುರಿತ ಚರ್ಚೆಯನ್ನು ಸರ್ಕಾರ ಯಾವುದೇ ಪರಿಶೀಲನೆ ನಡೆಸದೆ ಮಂದೂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಮಸೂದೆ ಕುರಿತು ಹೆಚ್ಚು ಚರ್ಚೆಯುವ ಅಗತ್ಯವಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರೂ ಆದ ರೈಲ್ವೆ ಸಚಿವ ಮುಕುಲ್ ರಾವ್ ಅವರು ಪ್ರಧಾನಿ ಮನಮೋಹನ್ ಅವರಿಗೆ ಬುಧವಾರ ಪತ್ರವನ್ನೂ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಈ ಮಸೂದೆಗೆ ಅಂಗೀಕಾರ ನಿರ್ಧಾರವನ್ನು ಮುಂದೂಡಲು ಬುಧವಾರ ರಾತ್ರಿ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ಸಭೆಯ ಕಲಾಪಪಟ್ಟಿಯಲ್ಲಿ ಈ ಮಸೂದೆ ಕುರಿತ ಚರ್ಚೆ ಮೂರನೇ ವಿಷಯವಾಗಿ ಅಳವಡಿಕೆಯಾಗಿತ್ತು.
ಆದರೆ ಎರಡು ವಿಷಯಗಳ ಕುರಿತ ಚರ್ಚೆ ಮುಗಿದ ನಂತರ ಸಂಪುಟ ಕಾರ್ಯದರ್ಶಿ ಅಜಿತ್ ಸೇಥ್ ಅವರು, ಮೂರನೇ ವಿಷಯವನ್ನು ಕೈಬಿಡಲಾಗಿದ್ದು, ನಾಲ್ಕನೇ ವಿಷಯದ ಕುರಿತು ಚರ್ಚಿಸಬೇಕು ಎಂದು ಸೂಚಿಸಿದರು.
ಮುಕುಲ್ ರಾಯ್ ಅವರು ಗುರುವಾರ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರಾದರೂ ಪಿಂಚಣಿ ಸುಧಾರಣೆ ಮಸೂದೆ (ಪಿಎಫ್‌ಆರ್‌ಡಿಎ) ಕುರಿತು ಏನನ್ನೂ ಮಾತನಾಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.